ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬರುವ ಭಕ್ತಾಧಿಗಳು ಸಾಂಪ್ರದಾಯಿಕ ಉಡುಗೆ ಧರಿಸುವಂತೆ ಡ್ರೆಸ್ ಕೋಡ್ ಮಾಡಬೇಕೆಂದು ಹಿಂದೂ ಬಲಪಂಥೀಯ ಸಂಘಟನೆಗಳಾದ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗ ದಳ ಸರ್ಕಾರವನ್ನು ಆಗ್ರಹಿಸಿವೆ.
ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿನ ಇತರ ದೇವಾಲಯಗಳಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಡ್ರೆಸ್ ಕೋಡ್ ಜಾರಿಗೆ ತರಬೇಕೆಂದು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ರಾಜ್ಯದಲ್ಲಿನ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿಯೂ ಡ್ರೆಸ್ ಕೋಡ್ ಜಾರಿ ಮಾಡಬೇಕೆಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ದೇವಾಲಯ ಆಡಳಿತ ಮಂಡಳಿ ಡ್ರೆಸ್ ಕೋಡ್ ಜಾರಿ ಮಾಡಲು ಸಾಧ್ಯವಿಲ್ಲ, ಈ ಸಂಬಂಧ ಹಿಂದೂಪರ ಸಂಘಟನೆಗಳು ನೀಡಿರುವ ಮನವಿ ಪತ್ರವನ್ನು ಮುಜರಾಯಿ ಇಲಾಖೆಗೆ ವರ್ಗಾವಣೆ ಮಾಡಲಾಗುವುದು ಈ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಕುಕ್ಕೆ ದೇವಾಲಯದ ಎಕ್ಸಿಕ್ಯೂಟಿವ್ ಆಫೀಸರ್ ಎಂ. ಹೆಚ್. ರವೀಂದ್ರ ಹೇಳಿದ್ದಾರೆ.
ಭಕ್ತಾಧಿಗಳು ಟಿ- ಶರ್ಟ್, ಜಿನ್ಸ್ ಫ್ಯಾಂಟ್, ಹಾಫ್ ಪ್ಯಾಂಟ್ ಧರಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವುದು ಸರಿಯಲ್ಲ, ಭಕ್ತಾಧಿಗಳು ದೇವರ ದರ್ಶನಕ್ಕೆ ಬಂದಾಗ ಸಾಂಪ್ರದಾಯಿಕ ಉಡುಗೆ ಧರಿಸಬೇಕು ಎಂದು ವಿಹೆಚ್ ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಕುಮಾರ್ ಹೇಳಿದ್ದಾರೆ.
Advertisement