ಬ್ರಹ್ಮೋತ್ಸವ ನಡೆಯುತ್ತಿರುವ ಕದ್ರಿ ದೇಗುಲ ಬಾಂಬರ್ ನ ಟಾರ್ಗೆಟ್ ಆಗಿತ್ತು?

ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದ ಎಂಬ ಸ್ಫೋಟಕ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದ ಎಂಬ ಸ್ಫೋಟಕ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬಾಂಬ್ ಪತ್ತೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ. ಈಗಾಗಲೇ ಶಂಕಿತ ವ್ಯಕ್ತಿ ಬಂದಿದ್ದ ಎನ್ನಲಾದ ಆಟೋ ಮತ್ತು ಆಟೋ ಚಾಲಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.  ಪೊಲೀಸ್ ಮೂಲಗಳ ಪ್ರಕಾರ ಶಂಕಿತ ಆರೋಪಿಯು ಕೆಂಜಾರುವರೆಗೆ ನಗರ ಸಾರಿಗೆ ಬಸ್ ನಲ್ಲಿ ಬಂದಿದ್ದ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬೇರೆ ವಾಹನದಲ್ಲಿ ಬಂದಿದ್ದ. ಬಾಂಬ್‌ ಇರಿಸಿ ನಡೆದುಕೊಂಡೇ ಕೆಂಜಾರುವರೆಗೆ ಬಂದಿದ್ದ ಎಂದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಬೇರೆ ಪ್ರಯಾಣಿಕರೊಬ್ಬರನ್ನು ಕರೆತಂದಿದ್ದ ಆಟೊ ರಿಕ್ಷಾ ಕೆಂಜಾರಿಗೆ ಬಂದಾಗ ಆರೋಪಿ ಅಲ್ಲಿ ನಡೆದು ಹೋಗುತ್ತಿದ್ದ. ಕೈ ಅಡ್ಡ ಹಾಕಿ, 'ಕದ್ರಿ ದೇವಸ್ಥಾನಕ್ಕೆ ಬಿಡುತ್ತೀರಾ? ಎಷ್ಟು ದರ?' ಎಂದು ವಿಚಾರಿಸಿದ್ದ. ಆಟೊ ಚಾಲಕ ಹೇಳಿದ್ದ ಮೊತ್ತಕ್ಕೆ ಒಪ್ಪದೇ ಕಾವೂರುವರೆಗೆ ಮಾತ್ರ ಆಟೊದಲ್ಲಿ ಬಂದಿದ್ದ. ಅಲ್ಲಿ ಇಳಿದು ನಾಪತ್ತೆಯಾಗಿದ್ದಾನೆ ಎಂದು ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಇದೀಗ ಆಟೊ ಚಾಲಕನನ್ನು ಪತ್ತೆ ಮಾಡಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ. ಶಂಕಿತ ವ್ಯಕ್ತಿಯು ತುಳು ಭಾಷೆಯಲ್ಲೇ ತನ್ನೊಂದಿಗೆ ಮಾತನಾಡಿದ್ದಾ‌ನೆ. ವಾಪಸ್ ಹೋಗುವಾಗಲೂ ಆತನ ಬಳಿ ಒಂದು ಬ್ಯಾಗ್ ಇತ್ತು ಎಂಬ ಮಾಹಿತಿಯನ್ನೂ ಆಟೊ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಕದ್ರಿ ದೇಗುಲ ಬ್ರಹ್ಮೋತ್ಸವವೇ ಉಗ್ರರ ಟಾರ್ಗೆಟ್?
ಇನ್ನು ಪೊಲೀಸರು ಕಲೆಹಾಕಿರುವ ಮಾಹಿತಿ ಅನ್ವಯ ಕದ್ರಿ ದೇಗುಲ ಬ್ರಹ್ಮೋತ್ಸವವೇ ಉಗ್ರರ ಟಾರ್ಗೆಟ್ ಆಗಿತ್ತು. ಪ್ರಸ್ತುತ ಕದ್ರಿ ದೇಗುಲದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದಲ್ಲಿ ಸುಮಾರು 30 ರಿಂದ 40 ಸಾವಿರ ಮಂದಿ ಭಕ್ತರು ಸೇರುವ ಸಾಧ್ಯತೆ ಇತ್ತು. ಇದೇ ಕಾರಣಕ್ಕೆ ಉಗ್ರರು ಕದ್ರಿ ದೇಗುಲವನ್ನೇ ಟಾರ್ಗೆಟ್ ಮಾಡಿ ಬಾಂಬ್ ಸ್ಫೋಟಕ್ಕೆ ಯತ್ನಿಸಿರಬಹುದು ಎನ್ನಲಾಗಿದೆ.

ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
ಮಂಗಳೂರಿನ ಬಜ್ಪೆ ವಿಮಾನದಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈ ಅಲರ್ಟ್ ಘೋಷಿಸಲಾಗಿದ್ದು, ಇದೇ ತಿಂಗಳು 28ರವರೆಗೆ ವಿಮಾನ ನಿಲ್ದಾಣದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯಲ್ಲಿನ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಕೇಂದ್ರದ ಭದ್ರತಾ ಪಡೆಗಳ ಜೊತೆಗೆ ರಾಜ್ಯ ಪೊಲೀಸರ ಭದ್ರತೆಯನ್ನು ಹೆಚ್ಚಿಸಲಾಗಿದೆ.  ವಿಮಾನ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಜೊತೆಗೆ ಲಗೇಜ್‌ಗಳ ತಪಾಸಣೆಗೆ ಎಕ್ಸ್‌ ರೇ ಯಂತ್ರ, ಲೋಹ ಶೋಧಕ ಯಂತ್ರಗಳಲ್ಲಿ ಪ್ರತಿಧಿಯೊಂದು ಲಗೇಜನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಅನುಮಾನ ಬಂದ ಬ್ಯಾಗ್‌ಗಳನ್ನು ಪ್ರತ್ಯೇಕವಾಗಿ ತಪಾಸಣೆಗೆ ಸಿಐಎಸ್‌ಎಫ್‌ ಅಧಿಕಾರಿಗಳು ಒಳಪಡಿಸುತ್ತಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈಗಾಗಲೇ ಭದ್ರತೆಗಾಗಿ ಕೆಪಿಎಲ್ ಬಳಿಯ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ, ಶ್ವಾನ ದಳ, ಕೆಎಸ್‌ಆರ್‌ಪಿ ತುಕಡಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು, ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿಯೂ ನಿನ್ನೆ ಸಜೀವಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನಾಸ್ಪದ ವಸ್ತುಗಳು, ವ್ಯಕ್ತಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ರಾಜ್ಯ ಅಪರಾಧ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಮರ್‌ಕುಮಾರ್‌ ಪಾಂಡೆ ನಿರ್ದೇಶನ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com