
ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ಹೆಸರಿನಲ್ಲಿ ನಗರದ ದೇವರ ಬೀಸನಹಳ್ಳಿ, ಕುಂದನಹಳ್ಳಿ, ಕರಿಯಮ್ಮನ ಅಗ್ರಹಾರ ಹಾಗೂ ಬೆಳ್ಳಂದೂರಿನ ವಿವಿಧ ಭಾಗಗಳಲ್ಲಿನ ಜೋಪಡಿಗಳನ್ನು ನೆಲ ಮಾಡುವ ಕುರಿತು ಯಾರು ಆದೇಶ ನೀಡಿದ್ದರು ಎಂಬುದನ್ನು ಪತ್ತೆ ಹಚ್ಚಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಜೋಪಡಿಗಳನ್ನು ತೆರವುಗೊಳಿಸಿರುವ ಕ್ರಮ ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್- ಕರ್ನಾಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಏಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ಜೋಪಡಿಗಳ ನೆಲಸಮ ಮಾಡುವುದಕ್ಕೆ ಆದೇಶ ನೀಡಿದವರು ಯಾರು? ಪ್ರಶ್ನಿಸಿರುವ ನ್ಯಾಯಪೀಠ, ವಿವಾದಿಕ ಪ್ರದೇಶದಲ್ಲಿ ವಾಸ ಮಾಡುತ್ತಿದ್ದವರು ಅಕ್ರಮ ವಲಸಿಗರು ಎಂದು ಹೇಗೆ ನಿರ್ಧರಿಸಲಾಯಿತು, ಮುಲ ಯಾವುದು, ದಾಖಲೆಗಳೇನು ಎಂದು ಕೇಳಿದೆ.
ಅಲ್ಲದೆ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಮಾರತ್ ಹಳ್ಳಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್'ಗೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಮುಂದಿನ ತೆರವು ಕಾರ್ಯಾಚರಣೆಗೆ ಮದ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಜ.30ಕತ್ಕೆ ಮುಂದೂಡಿದೆ.
ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆಂಬ ಕಾರಣ ನೀಡಿ ಮಾರತಹಳ್ಳಿಯಲ್ಲಿ ಜೋಪಡಿಗಳನ್ನು ನೆಲಸಮಗೊಳಿಸಲಾಗಿತ್ತು.
Advertisement