ಔರಾದ್ಕರ್ ವರದಿ ಜಾರಿಗೆ ಆಗ್ರಹ: ಹೋರಾಟ ಬಿಟ್ಟು ಪತ್ರ ಚಳುವಳಿ ಆರಂಭಿಸಿದ ಕರ್ನಾಟಕ ಪೊಲೀಸರು

ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ರಾಘವೇಂದ್ರ ಔರಾದ್ಕರ್ ವರದಿಯನ್ನು ಜಾರಿಗೊಳಿಸುವ ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿಯಲು ನಿರ್ಧರಿಸಿದ್ದ  ಪೊಲೀಸರು ಇದೀಗ ತಮ್ಮ ನಿಲುವನ್ನು ಬದಲಿಸಿದ್ದು, ಅನ್ಯಾಯ ಸರಿಪಡಿಸಿ ವೇತನ ತಾರತಮ್ಯ ನಿವಾರಿಸುವಂತೆ ಪತ್ರ ಚಳವಳಿ ಆರಂಭಿಸಿದ್ದಾರೆ.
ಕರ್ನಾಟಕ ಪೊಲೀಸರು
ಕರ್ನಾಟಕ ಪೊಲೀಸರು
Updated on

ಬೆಂಗಳೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ರಾಘವೇಂದ್ರ ಔರಾದ್ಕರ್ ವರದಿಯನ್ನು ಜಾರಿಗೊಳಿಸುವ ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿಯಲು ನಿರ್ಧರಿಸಿದ್ದ  ಪೊಲೀಸರು ಇದೀಗ ತಮ್ಮ ನಿಲುವನ್ನು ಬದಲಿಸಿದ್ದು, ಅನ್ಯಾಯ ಸರಿಪಡಿಸಿ ವೇತನ ತಾರತಮ್ಯ ನಿವಾರಿಸುವಂತೆ ಪತ್ರ ಚಳವಳಿ ಆರಂಭಿಸಿದ್ದಾರೆ.
 
ರಾಜ್ಯ ಸರ್ಕಾರ ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೊಳಿಸಿ ಪೊಲೀಸರ ಬೇಡಿಕೆಗಳನ್ನು ಈಡೇರಿಸಿರುವುದಾಗಿ  ಹೇಳಿಕೊಂಡಿದೆ. ಆದರೆ ಪೊಲೀಸರು ತಮ್ಮ ಬೇಡಿಕೆ ಸಾಕಾರಗೊಳಿಸುವಂತೆ ಸರ್ಕಾರದ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ. ತಮ್ಮ  ಪ್ರಮುಖ 25 ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಪೊಲೀಸ್ ಸಿಬ್ಬಂದಿ ರವಾನಿಸಿದೆ. ಸುಮಾರು 95 ಸಾವಿರ  ಪೊಲೀಸರ ಸಹಿ ಇದೆ ಎಂದು ಹೇಳಲಾದ `ನೊಂದ ಪೊಲೀಸರ ಹೆಸರಿನ' ಪತ್ರವನ್ನು ಮುಖ್ಯಮಂತ್ರಿ ಸಚಿವಾಲಯಕ್ಕೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

ಪೊಲೀಸ್ ಸಿಬ್ಬಂದಿಯ ಕೆಲಸಕ್ಕೆ ತಕ್ಕಂತೆ ವೇತನ.ಭತ್ಯೆ, ರಜೆ ದೊರೆಯುತ್ತಿಲ್ಲ ಎಂದು 2016 ರಲ್ಲಿ  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಪೊಲೀಸರು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ಆಗ ಪೊಲೀಸರಿಗೆ ಪ್ರತಿಭಟನೆಯ ಹಕ್ಕಿಲ್ಲ ಎಂದು ಅವರ ಪ್ರತಿಭಟನೆ ನಡೆಸದಂತೆ ತಡೆ ಹಿಡಿಯಲಾಯಿತು. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಪೊಲೀಸರ ಬೇಡಿಕೆ ಈಡೇರಿಸುವ ಕುರಿತು ವರದಿ ಸಲ್ಲಿಸಲು ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ 2016 ಜೂನ್‍ನಲ್ಲಿ ಸಮಿತಿ ರಚನೆ ಮಾಡಿತ್ತು.

ಔರಾದ್ಕರ್ ಸಮಿತಿ ಒಂದು ವರ್ಷ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್ ಸರ್ಕಾರ, ನಂತರ ಬಂದ ಮೈತ್ರಿ ಸರ್ಕಾರ ಪ್ರಯತ್ನ ನಡೆಸಿತ್ತು. ಮೈತ್ರಿ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ 2019 ರ ಅಕ್ಟೋಬರ್ 19 ರಂದು ಔರಾದ್ಕರ್ ವರದಿ ಅನ್ವಯ ಪೊಲೀಸರ ವೇತನ ಹೆಚ್ಚಳ ಮಾಡುವ ಆದೇಶ ಜಾರಿ ಮಾಡಿತ್ತು. ಆದರೆ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಈ ಆದೇಶ ಅನ್ವಯವಾಗದ ಕಾರಣ ಪೊಲೀಸರಲ್ಲಿ ಅಸಮಾಧಾನದ ವ್ಯಕ್ತವಾಗಿತ್ತು. ತಮಗಾದ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಅವಕಾಶವಿಲ್ಲದ ಕಾರಣ ಪೊಲೀಸರು ಮುಖ್ಯಮಂತ್ರಿಗೆ ಪತ್ರದ ಮೂಲಕ ಬೇಡಿಕೆ ಸಲ್ಲಿಸಿದ್ದಾರೆ. ಜತೆಗೆ ತಮಗಾಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಮ್ಮ ಬೇಡಿಕೆಗಳ ಪಟ್ಟಿ ಜೊತೆಗೆ ಮೊದಲು ತಾವು ಬರೆದಿರುವ ಪತ್ರವನ್ನು ಪೂರ್ಣವಾಗಿ ಸುಮಾರು 40-45 ನಿಮಿಷಗಳ ಕಾಲ ಸಮಾಧಾನದಿಂದ ತಾವೇ ಖುದ್ದಾಗಿ ಓದಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿಯನ್ನು ಪೂರ್ಣ ಜಾರಿಗೊಳಿಸಲು ಕನಿಷ್ಠ 5 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಜೆಟ್‍ ನಲ್ಲಿ ಮೀಸಲಿಡುವಂತೆ ಕೋರಿದ್ದಾರೆ. ಔರಾದ್ಕರ್ ವರದಿಯಲ್ಲಿ ಎಎಸ್‍ಐ, ಎಚ್‍ಸಿ, ಪಿಸಿ ಸೇರಿದಂತೆ ಕೆಳ ಹಂತದ ಪೊಲೀಸ್ ಸಿಬ್ಬಂದಿ ಗಳ ಮೂಲ ವೇತನದಲ್ಲಿ ಶೇಕಡಾ 30 ರಿಂದ 35 ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು.ಅದರಂತೆ ವೇತನ,ಭತ್ಯೆಯನ್ನು ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದಾರೆ.

ತೆಲಂಗಾಣದಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವ ಪೇದೆಗೆ ಎಲ್ಲ ಭತ್ಯೆಗಳು ಸೇರಿ 45 ಸಾವಿರ ರೂ ಸಿಗಲಿದೆ.ಆದರೆ ಕರ್ನಾಟಕದಲ್ಲಿ 32 ಸಾವಿರ ರೂ.ಮಾತ್ರ ದೊರೆಯುತ್ತಿದೆ. ಹೀಗಾಗಿ ತೆಲಂಗಾಣ ಮಾದರಿಯಲ್ಲಿ  ವೇತನ ಪರಿಷ್ಕರಣೆ ಮಾಡುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.2.5 ಲಕ್ಷ ಕೋಟಿ ಬೃಹತ್ ಗಾತ್ರದ ರಾಜ್ಯ ಬಜೆಟ್ ನಲ್ಲಿ 5 ಸಾವಿರ ಕೋಟಿ ಹೊರೆಯಾಗುವುದಿಲ್ಲ ಎಂದು  ಪತ್ರದಲ್ಲಿ ತಿಳಿಸಿದ್ದಾರೆ.

2006 ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮುಂದು ವರೆಸಬೇಕು. ಅಲ್ಲದೆ 2006 ಏಪ್ರಿಲ್ 1 ರಿಂದ ಪೂರ್ವಾನ್ವಯ ಪಿಂಚಣಿ ಯೋಜನೆಯನ್ನು ಬಜೆಟ್‍ನಲ್ಲಿ ಜಾರಿಗೊಳಿಸಬೇಕು. ಪೊಲೀಸರಿಗೆ ಪ್ರತಿ ತಿಂಗಳು ಪಡಿತರ ಬದಲು ನೀಡುತ್ತಿರುವ ಆಹಾರ ಧಾನ್ಯ ಭತ್ಯೆಯನ್ನು 400 ರೂ.ಗಳಿಂದ 2000 ಕ್ಕೆ ಹೆಚ್ಚಿಸಬೇಕು.

ಪೊಲೀಸ್ ಪೇದೆ  ಮತ್ತು ಮುಖ್ಯಪೇದೆ (ಎಚ್‍ಸಿ)ಗಳಿಗೆ ವಾರದ ರಜೆಯ ಬದಲು 200 ರೂ.ನೀಡುವ (ರಜೆ ನಗದೀಕರಣ) ಭತ್ಯೆ ವ್ಯವಸ್ಥೆಯನ್ನು ಶಾಶ್ವತವಾಗಿ ರದ್ದುಗೊಳಿಸಿ, ಆಂಧ್ರಪ್ರದೇಶದ ರೀತಿಯಲ್ಲಿ ಕಡ್ಡಾಯ ವಾರದ ರಜೆ ನೀಡುವ ನಿರ್ಧಾರ ಕೈಗೊಳ್ಳಬೇಕು. ಪೊಲೀಸ್ ಪೇದೆಯಿಂದ ಪಿಎಸ್‍ಐವರೆಗೂ ನೀಡುವ ಸ್ಪೆಷಲ್ ಕಿಟ್ ಭತ್ಯೆಯನ್ನು 40 ರಿಂದ 500 ರೂ.ಗೆ ಹಚ್ಚಳ ಮಾಡಬೇಕು.ಸಾರಿಗೆ ಭತ್ಯೆ ಯನ್ನು 600 ರಿಂದ 2 ಸಾವಿರಕ್ಕೆ ಹೆಚ್ಚಿಸಬೇಕು. ಪ್ರತೀ ತಿಂಗಳಲ್ಲಿ ಸರ್ಕಾರಿ ನೌಕರರಿಗೆ 2ನೇ ಹಾಗೂ 4 ನೇ ಶನಿವಾರ ರಜೆ ಪೊಲೀಸರಿಗೆ ಸಿಗುವುದಿಲ್ಲ. ಅದಕ್ಕಾಗಿ ವಾರ್ಷಿಕ ಒಂದು ತಿಂಗಳು ಹೆಚ್ಚುವರಿ ವೇತನ ನೀಡಬೇಕು.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾದರಿಯಲ್ಲಿ ತಂತ್ರಾಂಶ ಮೂಲಕ ರಜೆ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು.

ಪೊಲೀಸರಿಗೆ ನೀಡುವ ವಾರದ ರಜೆ ಭತ್ಯೆ, ಸಮವಸ್ತ್ರ, ಉಚಿತ ಪಡಿತರ ಬದಲಿಗೆ ನೀಡುವ ಭತ್ಯೆ, ಸ್ಪೆಷಲ್ ಕಿಟ್, ವೈದ್ಯಕೀಯ ಭತ್ಯೆಗಳು ಪ್ರತಿ ಎರಡು ವರ್ಷಕ್ಕೊಮ್ಮೆ ನಿಯಮಿತ ವಾಗಿ ಹೆಚ್ಚಳವಾಗುವಂತೆ ಅಗತ್ಯ ನಿಯಮಾವಳಿಗಳನ್ನು ರೂಪಿಸಬೇಕು.
ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ವರ್ಷದಲ್ಲಿ ಒಂದು ತಿಂಗಳು ರೈಲು ಹಾಗೂ ಬಸ್‍ನಲ್ಲಿ ಉಚಿತ ಪ್ರವಾಸ ಕೈಗೊಳ್ಳಲು ಸೌಲಭ್ಯ ಕಲ್ಪಿಸಬೇಕು. ಪೊಲೀಸ್ ಸಿಬ್ಬಂದಿಗೆ ಉಚಿತ್ ಬಸ್ ಪಾಸ್ ವ್ಯವಸ್ಥೆ ಮಾಡಬೇಕು. ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಲು ಸೂಕ್ತ ನಿಯಮಗಳನ್ನು ರೂಪಿಸಿ, 8 ಗಂಟೆಗಿಂತಲೂ ಹೆಚ್ಚಿನ ಅವಧಿ ಕೆಲಸ ಮಾಡಿದರೆ, ಪ್ರತಿ ಗಂಟೆಗೂ ಕನಿಷ್ಠ 500 ರೂ.ಭತ್ಯೆಯನ್ನು ನೀಡುವಂತೆ ಆದೇಶ ಹೊರಡಿಸಬೇಕು.

ಮೈಸೂರು,ಚಿಕ್ಕಮಗಳೂರು,ಕೊಡಗು,ಶಿವಮೊಗ್ಗ, ಧಾರವಾಡ, ದಾವಣಗೆರೆ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಹಾಗೂ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರ, ಮೈಸೂರು ನಗರದ ನೊಂದ ಸುಮಾರು 95 ರಿಂದ 98 ಸಾವಿರ ಎಎಸ್‍ಐ, ಎಚ್‍ಸಿ, ಪಿಸಿ, ಪೊಲೀಸ್ ಸಿಬ್ಬಂದಿ ಈ ಮನವಿಪತ್ರಕ್ಕೆ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ. ತಮ್ಮ ಬೇಡಿಕೆಗಳನ್ನು ನೇರವಾಗಿ ಯಾರ ಮುಂದೆಯೂ ಹೇಳಲಾಗದ ಇಕ್ಕಟ್ಟಿನಲ್ಲಿ ಸಿಲುಕಿರುವ ಪೊಲೀಸರು ನೇರವಾಗಿ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪೊಲೀಸರ ಪ್ರಯತ್ನಕ್ಕೆ ಮುಖ್ಯಮಂತ್ರಿಗಳು ಹೇಗೆ  ಸ್ಪಂದಿಸುತ್ತಾರೆ ಮತ್ತು ಬಜೆಟ್ ನಲ್ಲಿ ಅನುದಾನ  ನಿಗದಿಪಡಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ರಾಜ್ಯದ ಪೊಲೀಸ್ ಸಿಬ್ಬಂದಿ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com