ಬಿಟಿಡಿಎ ಸಭಾಪತಿ ನೇಮಕದ ಸುತ್ತ ಅನುಮಾನದ ಹುತ್ತ: ತೆರೆಮರೆಯಲ್ಲಿ ಪೈಪೋಟಿ

ಕೇಸರಿ ಪಡೆಯ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕದ ಬೆನ್ನಲ್ಲೇ ಇನ್ನೊಂದು ಮಹತ್ವದ ಹುದ್ದೆಯಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿ ನೇಮಕ ಯಾವಾಗ? ನೇಮಕಕ್ಕೆ ಯಾಕಿಷ್ಟು ವಿಳಂಬ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕುತ್ತಿಲ್ಲ
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ

ಬಾಗಲಕೋಟೆ: ಕೇಸರಿ ಪಡೆಯ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕದ ಬೆನ್ನಲ್ಲೇ ಇನ್ನೊಂದು ಮಹತ್ವದ ಹುದ್ದೆಯಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿ ನೇಮಕ ಯಾವಾಗ? ನೇಮಕಕ್ಕೆ ಯಾಕಿಷ್ಟು ವಿಳಂಬ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕುತ್ತಿಲ್ಲ

ಜಿಲ್ಲಾಧ್ಯಕ್ಷರ ನೇಮಕದ ಹಿಂದೆ ಸಾಕಷ್ಟು ಪೈಪೋಟಿ ಇತ್ತು. ಸಚಿವರು, ಶಾಸಕರು ಹಾಗೂ ಮುಖಂಡರು ತಮ್ಮ ಬೆಂಬಲಿಗರನ್ನೇ ಅಧ್ಯಕ್ಷ ಗಾದಿಗೆ ಕೂಡ್ರಿಸಬೇಕು ಎನ್ನುವ ಆಶಯ ಹೊಂದಿದ್ದರು. ಈ ಆಶಯದಲ್ಲಿ ಸಚಿವ ಬಿ. ಶ್ರೀರಾಮುಲು, ಸಂಸದ ಪಿ.ಸಿ.ಗದ್ದಿಗೌಡರ ಬಯಕೆ ಈಡೇರಿದಂತಿದೆ. ಪರಿಣಾಮವಾಗಿ ಮರಳು ದೋರೆ ಎಸ್.ಟಿ.ಪಾಟೀಲ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಆಗಲಿರುವ ಬಾಗಲಕೋಟೆ ಪಟ್ಟಣದ ಹಿನ್ನೀರು ಪ್ರದೇಶದ ಮುಳುಗಡೆ ಸಂತ್ರಸ್ತರ ಸ್ಥಳಾಂತರ, ಪರಿಹಾರ ಹಂಚಿಕೆ, ಪುನರ್ವಸತಿ, ಭೂಸ್ವಾಧೀನದಂತಹ ಪ್ರಮುಖ ಕೆಲಸ ಬಿಟಿಡಿಎದಿಂದ ಆಗಬೇಕಿದೆ. ಸರ್ಕಾರದ ಬಂದು ಆರು ತಿಂಗಳು ಆಗುತ್ತ ಬಂದರೂ ಇದುವರೆಗೂ ಬಿಟಿಡಿಎ ಸಭಾಪತಿ ನೇಮಕವಾಗುತ್ತಿಲ್ಲ. 

ಬಿಟಿಡಿಎ ಸಭಾಪತಿ ಸ್ಥಾನ ಇತರ  ಯಾವುದೇ ಮಹತ್ವದ ನಿಗಮ ಮಂಡಳಿಗಿಂತ  ಕಡಿಮೆಯದ್ದೇನಲ್ಲ. ಇದೊಂದು ಗಂಜಿ ಕೇಂದ್ರವೂ ಅಲ್ಲ. ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆ ಆಗಲಿರುವ ಬಾಗಲಕೋಟೆ ಪಟ್ಟಣದ ಹಿನ್ನೀರು ಬಾಧಿತ ಸಂತ್ರಸ್ತರಿಗೆ ಬದಕು ಕಟ್ಟಿಕೊಡುವ ಅತ್ಯಂತ ಮಹತ್ವದ ಸ್ಥಾನವಾಗಿದೆ. ಆದರೂ ಸಭಾಪತಿ ನೇಮಕ ಆಗುತ್ತಿಲ್ಲ.

ಈಗಾಗಲೇ ಪಕ್ಕದ ವಿಜಯಪುರ ಬುಡಾ ಅಧ್ಯಕ್ಷರ ನೇಮಕವಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕವಾಗಿದೆ. ಸಭಾಪತಿ ಸ್ಥಾನದ ನೇಮಕ ಏಕೆ ವಿಳಂಬವಾಗುತ್ತಿದೆ ಎನ್ನುವ ಯಕ್ಷಪ್ರಶ್ನೆ ಬಾಗಲಕೋಟೆ ಜನತೆಯನ್ನು ಕಾಡಲಾರಂಭಿಸಿದೆ.

ಹಾಗ ನೋಡಿದರೆ ಬಿಟಿಡಿಎ ಸಭಾಪತಿ ಸ್ಥಾನದ ನೇಮಕ ಕಷ್ಟದ್ದೆನಲ್ಲ. ಸಭಾಪತಿ ಸ್ಥಾನಕ್ಕಾಗಿ ಎಷ್ಟೆ ಪೈಪೋಟಿ ಇದ್ದರೂ ಸ್ಥಳೀಯ ಶಾಸಕರು ಯಾರ ಹೆಸರನ್ನು ಶಿಫಾರಸು ಮಾಡುತ್ತಾರೋ ಅವರ ನೇಮಕವಾಗುತ್ತದೆ. 

ಬಾಗಲಕೋಟೆ ಕ್ಷೇತ್ರದ ಶಾಸಕರೂ ಬಿಜೆಪಿ ಶಾಸಕರೇ ಆಗಿರುವುದರಿಂದ ಇದೊಂದು ಅತ್ಯಂತ ಸರಳ ಕಾರ್ಯವಾಗಿದೆ. ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಶಾಸಕರ ಮಾತಿಗೆ ಇಲ್ಲಿ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ. ಎಲ್ಲರೂ ಅವರ ನಿರ್ಧಾರಕ್ಕೆ ಬೆಂಬಲ ನೀಡುತ್ತಾರೆ. ಅವರು ಯಾರ ಹೆಸರನ್ನು ಸಭಾಪತಿ ಸ್ಥಾನಕ್ಕೆ ಶಿಫಾರಸು ಮಾಡುತ್ತಾರೋ ಅವರೇ ಅಂತಿಮ ಎನ್ನುವ ಸ್ಥಿತಿ ಇದೆ. ಹಾಗಿದ್ದು ನೇಮಕ ತಡವಾಗುತ್ತಿರುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ತೆರೆಮರೆಯಲ್ಲಿ ಸಭಾಪತಿ ಸ್ಥಾನಕ್ಕಾಗಿ ಪೈಪೋಟಿ ಏನಾದರೂ ಶುರುವಾಗಿರಬಹುದಾ ಎನ್ನುವ ಅನುಮಾನ ಶುರುವಾಗಿದೆ. ಏನೇ ಪೈಪೋಟಿ ನಡೆದರೂ ಶಾಸಕರ ಮಾತೆ ಅಂತಿಮವಾಗಲಿದ್ದು, ಸರ್ಕಾರ ಆದಷ್ಟು ಬೇಗ ಸಭಾಪತಿ ನೇಮಕ ಆದೇಶವನ್ನು ಹೊರಡಿಸಬೇಕು ಎನ್ನುವುದು ಜನತೆಯ ಆಶಯವಾಗಿದೆ.

ಸಭಾಪತಿ ಸ್ಥಾನದ ನೇಮಕದಿಂದ ಬರುವ ಬಜೆಟ್‌ನಲ್ಲಿ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಹೆಚ್ಚಿನ ಅನುದಾನ ಪಡೆದುಕೊಳ್ಳಲು ಸಹಾಯಕವಾಗಲಿದೆ. ನವನಗರ ಪುನರ್ವಸತಿ ಕೇಂದ್ರದ ಅಭಿವೃದ್ಧಿ ಜತೆಗೆ ಯುನಿಟ್-೩ ರ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡಲು ಸಹಕಾರಿ ಆಗಲಿದೆ ಎನ್ನುವುದು ಸಂತ್ರಸ್ತರ ವಾದವಾಗಿದೆ

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com