ಗದಗ: ಕೊರೋನಾ ಸಾಂಕ್ರಾಮಿಕ ಜನತೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ತನ್ನ ತಂದೆ ಮೃತಪಟ್ಟಿದ್ದರೂ ವಿದ್ಯಾರ್ಥಿನಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಗದಗದಲ್ಲಿ ವರದಿಯಾಗಿದೆ.
ಅನುಷಾ ಭಜಂತ್ರಿ ಎಂಬ ವಿದ್ಯಾರ್ಥಿನಿ ಇಂದು ಪರೀಕ್ಷೆಗೆ ಹಾಜರಾಗಿದ್ದು, ನಿನ್ನೆ ಅವರ ತಂದೆ ಸುರೇಶ್ ಕಿಡ್ನಿ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಇಂದು ಅನುಷಾ ಅವರ ತಂದೆಯ ಅಂತ್ಯ ಸಂಸ್ಕಾರ ನಡೆಯಲಿದ್ದು, ಇದರ ನಡುವೆಯೇ ಅನುಷಾ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸುರೇಶ್ ಅವರು ತಮ್ಮ ಮಗಳ ಓದಿನ ಕುರಿತು ಸಾಕಷ್ಟು ಕನಸು ಕಂಡಿದ್ದರಂತೆ. ಇದೇ ಕಾರಣಕ್ಕೆ ಅನುಷಾ ಇಂದು ತಪ್ಪದೇ ಪರೀಕ್ಷೆಗೆ ಹಾಜರಾಗಿದ್ದಾರೆ. ನಗರದ ರೆಡ್ಡಿ ಕಾಲೇಜ್‍ನಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಅನುಷಾ ಪರೀಕ್ಷೆ ಬರೆದಿದ್ದಾರೆ.
ನೀನು ಪರೀಕ್ಷೆ ಬರೆದು ಬರುವವರೆಗೂ ಅಂತ್ಯಸಂಸ್ಕಾರ ನಡೆಸಲ್ಲ ಎಂದು ಕುಟುಂಬಸ್ಥರು ಅಭಯ ನೀಡಿದ ನಂತರ ಅನುಷಾ ಪರೀಕ್ಷೆ ಬರೆಯಲು ತೆರಳಿದ್ದಾಳೆ. ಈ ವೇಳೆ ಅನುಷಾ ಓದುತ್ತಿರುವ ತೋಂಟದಾರ್ಯ ಶಾಲೆಯ ಸಿಬ್ಬಂದಿ ಹಾಗೂ ಗದಗ ಶಹರ ಬಿಇಒ ಕೆಳದಿಮಠ ಅನುಷಾಗೆ ಮಾನಸಿಕ ಸ್ಥೈರ್ಯ ತುಂಬಿ ಪರೀಕ್ಷಾ ಕೊಠಡಿಗೆ ಕಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅನುಷಾ ಸಂಬಂಧಿ ಮೌನೇಷ್ ಭಜಂತ್ರಿ ಅವರು, ಸಪ್ಲಿಮೆಂಟರಿಯಲ್ಲಿ ಪರೀಕ್ಷೆ ಬರೆಯಬಹುದು ಎಂದು ಹಲವರು ಸಲಹೆ ನೀಡಿದ್ದರೂ, ಆಕೆ ನಾನು ಬರುವವರೆಗೂ ತಂದೆಯ ಅಂತ್ಯಕ್ರಿಯೆ ನಡೆಸಬಾರದು ಎಂದು ಹೇಳಿ ಪರೀಕ್ಷೆಗೆ ತೆರಳಿದ್ದಾಳೆ. ಆಕೆಯ ಮಾತಿನಂತೆ ಪರೀಕ್ಷೆ ಮುಗಿಸಿ ಬರುವವರೆಗೂ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಸ್ಥಗಿತ ಮಾಡಲಾಗಿದೆ. ಆಕೆ ಬಂದ ಬಳಿಕವೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
Advertisement