ಮುಳುಗುತ್ತಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿವಿಗೆ ಆಸರೆ ಆಗುತ್ತಾರಾ ಕಾರಜೋಳ?

ಮುಧೋಳದ ಕವಿ ಚಕ್ರವರ್ತಿ ರನ್ನನ ಹೆಸರಿನಲ್ಲಿರುವ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಬಾಕಿ ಹಣ ಪಾವತಿಸಲಾಗದಂತಹ ಸ್ಥಿತಿಗೆ ತಲುಪಿದ್ದು, ಅದು ಎಲ್ಲಿ ಭವಿಷ್ಯದಲ್ಲಿ ಖಾಸಗಿಯವರ ಪಾಲಾಗಲಿದೆ ಎನ್ನುವ ಆತಂಕ ಕಬ್ಬು ಬೆಳೆಗಾರರಲ್ಲಿ ಮನೆ ಮಾಡುತ್ತಿದೆ. 
ಮುಳುಗುತ್ತಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿವಿಗೆ ಆಸರೆ ಆಗುತ್ತಾರಾ ಕಾರಜೋಳ?

ಬಾಗಲಕೋಟೆ: ಮುಧೋಳದ ಕವಿ ಚಕ್ರವರ್ತಿ ರನ್ನನ ಹೆಸರಿನಲ್ಲಿರುವ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಬಾಕಿ ಹಣ ಪಾವತಿಸಲಾಗದಂತಹ ಸ್ಥಿತಿಗೆ ತಲುಪಿದ್ದು, ಅದು ಎಲ್ಲಿ ಭವಿಷ್ಯದಲ್ಲಿ ಖಾಸಗಿಯವರ ಪಾಲಾಗಲಿದೆ ಎನ್ನುವ ಆತಂಕ ಕಬ್ಬು ಬೆಳೆಗಾರರಲ್ಲಿ ಮನೆ ಮಾಡುತ್ತಿದೆ.

ಕಳೆದ ೧೫ ವರ್ಷಗಳಿಂದಲೂ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಬೆಂಬಲಿಗರ ಕಪಿಮುಷ್ಟಿಯಲ್ಲಿಯೇ ಇದೆ. ಜಿಲ್ಲೆಯಲ್ಲಿನ ಖಾಸಗಿ ಸಕ್ಕರೆ ಕಾರ್ಖಾನೆಗಳ ಪೈಪೋಟಿ ಮಧ್ಯೆಯೂ ಸಹಕಾರಿ ರಂಗದಲ್ಲಿನ ಸಕ್ಕರೆ ಕಾರ್ಖಾನೆ ನಡೆಯುತ್ತಿರುವುದು ರೈತರ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.

ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಒಂದು ಬಾರಿ ಡಿಸಿಎಂ ಗೋವಿಂದ ಕಾರಜೋಳರೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಎನ್ನುವುದು ಗಮನಾರ್ಹ. ಸದ್ಯ ಅವರ ಬೆಂಬಲಿಗರ ಕೈಯಲ್ಲಿಯೇ ಕಾರ್ಖಾನೆ ಆಡಳಿತವಿದೆ. ಹಾಗಾಗಿ ಕಾರ್ಖಾನೆ ಉಳಿಸುವಲ್ಲಿ ಕಾರಜೋಳರ ಕಾಳಜಿ ಅಗತ್ಯವಾಗಿದೆ.

ಜಿಲ್ಲೆಯ ಕಬ್ಬು ಬೆಳೆಗಾರರು ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಮಾಡಿರುವ ಕಬ್ಬಿನ ಬಾಕಿ ಹಣ ಪಾವತಿಸುವಂತೆ ಜಿಲ್ಲಾಡಳಿತದ ಮೇಲೆ ಸಾಕಷ್ಟು ಒತ್ತಡ ಹಾಕುತ್ತಲೇ ಇದ್ದಾರೆ. ಜಿಲ್ಲಾಡಳಿತ ಕಳೆದೊಂದು ತಿಂಗಳು ಹಿಂದೆ ಕಾರ್ಖಾನೆ ಆಡಳಿತ ಮಂಡಳಿಯವರ ಸಭೆ ನಡೆಸಿ ಒಂದು ತಿಂಗಳಿನಲ್ಲಿ ಕಬ್ಬಿನ ಬಾಕಿ ಹಣ ಪಾವತಿಸುವಂತೆ ಸೂಚಿಸಿದ್ದರು. ಆದಾಗ್ಯೂ ಬಹುತೇಕ ಸಕ್ಕರೆ ಕಾರ್ಖಾನೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಾಕಿ ಹಣ ಪಾವತಿಸಿಲ್ಲ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬಾಕಿ ಹಣ ಉಳಿಸಿಕೊಂಡಿರುವುದು ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ. ಸದ್ಯ ಕಾರ್ಖಾನೆ ರೈತರಿಗೆ ೩೦ ಕೋಟಿ ರೂ. ಬಾಕಿ ಹಣ ಪಾವತಿಸಬೇಕಿದೆ. ಈ ಹಣವನ್ನು ಪಾವತಿಸದ ಸ್ಥಿತಿಗೆ ಕಾರ್ಖಾನೆ ಬಂದು ತಲುಪಿದ್ದು, ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ.

ಈ ಹಿಂದೆ ಜಿಲ್ಲೆಯಲ್ಲಿ ಖಾಸಗಿಯವರಿಗಿಂತ ಹೆಚ್ಚು ಬೆಲೆ ನೀಡಿದ ಕಾರ್ಖಾನೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಾರ್ಖಾನೆ ಪ್ರಸಕ್ತ ವರ್ಷ ಆರಂಭಗೊಳ್ಳುತ್ತದೋ ಇಲ್ಲವೆ ಎನ್ನುವ ಆತಂಕವನ್ನು ರೈತರು ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲೆಯ ಸಹಕಾರಿ ರಂಗದಲ್ಲಿನ ಏಕೈಕ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ದುರದೃಷ್ಟಕರ ಎನ್ನುವ ಮಾತು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಮೂಲಕ ರೈತರಿಗೆ ಆಸರೆ ಆಗಿರುವ ಕಾರ್ಖಾನೆಯನ್ನು ಉಳಿಸುವ ಕೆಲಸಕ್ಕೆ ಉಪಮುಖ್ಯಮಂತ್ರಿ ಕಾರಜೋಳರು ಮುಂದಾಗಬೇಕು ಎನ್ನುವ ಒತ್ತಾಯ ಕೂಡ ಆರಂಭಗೊAಡಿದೆ. ಆದರೆ ಕಾರ್ಖಾನೆ ಆಡಳಿತ ಮಂಡಳಿಯವರು ಡಿಸಿಎಂ ಕಾರಜೋಳರ ಮುಂದೆ ಇದುವರೆಗೂ ಸರ್ಕಾರದ ಆರ್ಥಿಕ ನೆರವಿನ ಪ್ರಸ್ತಾಪಿಸಿದ್ದಾರೋ ಇಲ್ಲವೋ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ತಾವೇ ಅಧ್ಯಕ್ಷರಾಗಿದ್ದು, ಈಗಲೂ ತಮ್ಮ ಬೆಂಬಲಿಗರೇ ಆಡಳಿತ ನಡೆಸುತ್ತಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಕಾರ್ಖಾನೆಗೆ ಆರ್ಥಿಕ ಸಹಾಯವನ್ನು ಒದಗಿಸಿ ರೈತರ ಬಾಕಿ ಹಣ ಪಾವತಿಗೆ ಅನುಕೂಲ ಮಾಡಿಕೊಡುವ ಜತೆಗೆ ಕಾರ್ಖಾನೆ ಪ್ರಸಕ್ತ ವರ್ಷ ಕಬ್ಬು ನುರಿಸುವಿಕೆ ಆರಂಭಿಸುವAತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.

ಈಗಾಗಲೇ ರಾಜ್ಯದಲ್ಲಿ ಸಹಕಾರಿ ರಂಗದಲ್ಲಿನ ಸಾಕಷ್ಟು ಸಕ್ಕರೆ ಕಾರ್ಖಾನೆಗಳು ಬಂದ್ ಆಗಿದ್ದು, ಚಾಲು ಇರುವ ಬಹುತೇಕ ಸಹಕಾರಿ ರಂಗದ ಕಾರ್ಖಾನೆಗಳನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರೆ. ಇದು ಕೂಡ ಆರ್ಥಿಕ ಸಂಕಷ್ಟದಿAದ ಬಂದ್ ಆಗಿ ಖಾಸಗಿ ಅವರ ಪಾಲಾಗದಂತೆ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾಗಿರುವ ಡಿಸಿಎಂ ಕಾರಜೋಳ ಮುತುವರ್ಜಿ ವಹಿಸಬೇಕಿದೆ. ಕಾರಜೋಳರು ಮನಸ್ಸು ಮಾಡಿದಲ್ಲಿ ಕಾರ್ಖಾನೆ ಉಳಿಸಿಕೊಳ್ಳುವುದು ದೊಡ್ಡ ಮಾತಲ್ಲ. ಅವರು ಶತಾಯ-ಗತಾಯ ಸರ್ಕಾರ ನೆರವು ಕೊಡಿಸುವ ಮೂಲಕ ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲಿನ ಕಾರ್ಖಾನೆಯನ್ನು ಉಳಿಸಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com