ಕೊರೋನಾ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬವಾಗುತ್ತಿರುವುದೇಕೆ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು: ನಾಗರಿಕರ ಕೊರೋನಾ ಪರೀಕ್ಷೆ ವರದಿ ಸಿಗುವುದಕ್ಕೆ ತಡವಾಗುತ್ತಿರುವುದು ಮತ್ತು ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗುತ್ತಿರುವುದು ಏಕೆಂದು ಪ್ರಶ್ನಿಸಿ ರಾಜ್ಯ ಹೈಕೋರ್ಟ್ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಳಿ ವಿವರ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಕೋವಿಡ್-19ಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿನ್ನೆ ಆಲಿಸುವ ಸಂದರ್ಭದಲ್ಲಿ, ಲ್ಯಾಬ್ ಗಳಿಂದ ಕೊರೋನಾ ಪರೀಕ್ಷೆ ವರದಿ ಸಿಗುವುದು ವಿಳಂಬವಾದರೆ ಮತ್ತು ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬವಾದರೆ ಬಹಳ ಸಮಸ್ಯೆಯಾಗುತ್ತದೆ ಎಂದು ಹೇಳಿದೆ.
ಇಷ್ಟು ತಡವಾದಾಗ ಈ ಮಧ್ಯೆ ಕುಟುಂಬ ಸದಸ್ಯರಿಗೆ ಅಥವಾ ಬೇರೊಬ್ಬರಿಗೆ ಸೋಂಕಿತರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಕೊರೋನಾ ರೋಗಿಯ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಆಸ್ಪತ್ರೆಗೆ ದಾಖಲಿಸಲು 12ರಿಂದ 14 ಗಂಟೆ ಬೇಕಾಗುತ್ತದೆ ಎಂದು ಬಿಬಿಎಂಪಿ ಪರ ವಕೀಲರು ವರದಿ ಸಲ್ಲಿಸಿದರು.
ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗುತ್ತಿರುವುದು ಮತ್ತು ಕೋವಿಡ್ 19 ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಬಿಬಿಎಂಪಿ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗಳು ಅಗತ್ಯವಿರುತ್ತಾರೆಯೇ ಎಂದು ಸಹ ಸರ್ಕಾರವನ್ನು ಹೈಕೋರ್ಟ್ ಕೇಳಿದೆ. ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುವ ವಿಚಾರವನ್ನು ಸಹ ನ್ಯಾಯಾಲಯ ಕೇಳಿತು. ಇಂತಹ ಆಸ್ಪತ್ರೆಗಳ ವಿರುದ್ಧ ವಿಚಾರಣೆ ನಡೆಸಿದರೆ ಜನರಿಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದಂತೆ ಆಗುತ್ತದೆ ಎಂದು ಕೂಡ ನ್ಯಾಯಾಲಯ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ