ಬಾಗಲಕೋಟೆ: ಪಂಚಮಿ ಉಂಡಿಗೂ ಬ್ರೇಕ್ ಹಾಕಿದ ಕೊರೋನಾ

ನಾಗರ ಪಂಚಮಿ ಬಂತೆದರೆ ಸಾಕು ನಾಡಿನಾದ್ಯಂತ ಸಂಭ್ರಮವೋ ಸಂಭ್ರಮ. ನಾಗರ ಅಮವಾಸ್ಯೆಗೂ ಮುನ್ನವೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಹುತೇಕರ ಮನೆಗಳಲ್ಲಿ ನಾನಾ ಬಗೆಯ ಉಂಡಿಗಳು ಸಿದ್ದಗೊಳ್ಳುತ್ತವೆ. ಮಹಾಮಾರಿ ಕೊರೋನಾ ತಹರೆವಾರಿ ಉಂಡಿಗಳ ತಯಾರಿಕೆಗೂ ಬ್ರೇಕ್ ಹಾಕಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಡಂಗುರ ಸಾರುವ ಸುದ್ದಿ ವೈರಲ್
ಸಾಮಾಜಿಕ ಜಾಲ ತಾಣಗಳಲ್ಲಿ ಡಂಗುರ ಸಾರುವ ಸುದ್ದಿ ವೈರಲ್

ಬಾಗಲಕೋಟೆ: ನಾಗರ ಪಂಚಮಿ ಬಂತೆದರೆ ಸಾಕು ನಾಡಿನಾದ್ಯಂತ ಸಂಭ್ರಮವೋ ಸಂಭ್ರಮ. ನಾಗರ ಅಮವಾಸ್ಯೆಗೂ ಮುನ್ನವೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಹುತೇಕರ ಮನೆಗಳಲ್ಲಿ ನಾನಾ ಬಗೆಯ ಉಂಡಿಗಳು ಸಿದ್ದಗೊಳ್ಳುತ್ತವೆ. ಮಹಾಮಾರಿ ಕೊರೋನಾ ತಹರೆವಾರಿ ಉಂಡಿಗಳ ತಯಾರಿಕೆಗೂ ಬ್ರೇಕ್ ಹಾಕಿದೆ.

ಕೊರೋನಾ ವೈರಸ್ ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ಜನತೆ ಮನೆಯಲ್ಲೆ ಹೆಚ್ಚಿನ ಕಾಲ ಕಳೆಯುತ್ತಿರುವಾಗ ನಾಗರ ಪಂಚಮಿಗೆ ಉಂಡಿಗಳನ್ನಾದರೂ ಮಾಡಿಕೊಂಡರಾಯಿತು ಎನ್ನುವ ಉಂಡಿಗಳ ತಯಾರಿಕೆಯ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೆಲವರು ಈ ವರ್ಷ ಉಂಡೆ ಮಾಡುವುದು ಬೇಡ, ಅದ್ದೂರಿ ಹಬ್ಬ ಆಚರಣೆಯೂ ಬೇಡ ಎನ್ನುವ ಅಭಿಪ್ರಾಯಕ್ಕೆ
ಬಂದಿದ್ದಾರೆ.

ಏತನ್ಮಧ್ಯೆ ಉಂಡಿ ಕೊಡುವುದು ಬೇಡ, ಉಂಡಿ ತೆಗೆದುಕೊಳ್ಳುವುದು ಬೇಡ ಎಂದು ಡಂಗೂರ ಸಾರಿದ ಸುದ್ದಿಯೊಂದು ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಉಂಡೆಗಳನ್ನು ತಯಾರಿಸಿಕೊಂಡು ಸರಳವಾಗಿ ನಾಗರ ಪಂಚಮಿ ಆಚರಿಸುವ ಲೆಕ್ಕಾಚಾರದಲ್ಲಿ ಜನರನ್ನು ಉಂಡಿಗಳ ಕೊಡಕೊಳ್ಳುವಿಕೆ ಬೇಡ ಎನ್ನುವ ವೈರಲ್ ಗೊಂದಲಕ್ಕೆ ಸಿಲುಕಿಸಿದೆ.

ಉಂಡೆಗಳ ಕೊಡಕೊಳ್ಳುವಿಕೆಯಿಂದಲೂ ಕೊರೋನಾ ವೈರಸ್ ಹರಡುವಿಕೆಗೆ ಕಾರಣವಾದೀತು ಎನ್ನುವ ಭಯ ಶುರುವಿಟ್ಟುಕೊಂಡಿದೆ. ಪ್ರತಿವರ್ಷ ನಾಗರ ಪಂಚಮಿಗೆ ಎಲ್ಲರೂ ಮನೆಗಳಲ್ಲಿ ನಾನಾ ಬಗೆಯ ಉಂಡೆಗಳನ್ನು ತಯಾರಿಸಿ, ನೆರೆ ಹೊರೆ ಮತ್ತು ಸಂಬಂಧಿಕರ ನಡುವೆ ಸೌಹಾರ್ದತೆ, ವಿಶ್ವಾಸ ವೃದ್ಧಿಯ ಪ್ರತೀಕವಾಗಿ ಪರಸ್ಪರರು ವಿನಿಮಯ
ಮಾಡಿಕೊಳ್ಳುತ್ತಾರೆ

ಮದುವೆಗಳು ಆಗಿರುವ ಮನೆಗಳಲ್ಲಂತೂ ಗಂಡನ ಮನೆಯವರು ಹೊಸ ಬೀಗರಿಗೆ ಉಂಡಿಗಳನ್ನು ತೆಗೆದುಕೊಂಡು ಹೋಗುವುದೇ ಒಂದು ರೀತಿಯಲ್ಲಿ ಭಾರಿ ಸಂಭ್ರಮ ಕಾಣುತ್ತದೆ. ಹೆಣ್ಣು ಮಕ್ಕಳಿಗೆ ತವರಿನಿಂದ ಪಂಚಮಿ ಉಂಡಿಗಳು ಬರುತ್ತವೆ ಎನ್ನುವುದು ಎಲ್ಲಿಲ್ಲದ ಉತ್ಸಾಹ. ಇಂತಹ ಉತ್ಸಾಹಕ್ಕೆ ನಾಗ ಪಂಚಮಿ ಹಬ್ಬದ ಅದ್ಧೂರಿ ಆಚರಣೆಗೆ ಕೊರೋನಾ ಬ್ರೇಕ್ ಹಾಕಿದೆ. ಪರಸ್ಪರರು ಉಂಡೆಗಳನ್ನು ಕೊಡಕೊಳ್ಳುವಿಕೆಯಿಂದಲೂ ಕೊರೋನಾ ಸೋಂಕು  ತಗುಲೀತು ಎನ್ನುವ ಭಯ ಬಹುತೇಕರಲ್ಲಿ ಮನೆ ಮಾಡುತ್ತಿದೆ. ಪರಸ್ಪರರ ನಡುವಿನ ಸಂಬಂಧಗಳಿಗೂ ಮಂಕು ಬಡಿಯಲು ಕೊರೋನಾ ಕಾರಣವಾಗುತ್ತಿದೆ.

ಪರಿಣಾಮವಾಗಿಯೇ ಗ್ರಾಮೀಣ ಭಾಗಗಳಲ್ಲಿ ಈ ಬಾರಿ ಪಂಚಮಿಗೆ ಉಂಡಿ ಕೊಡುವುದು ಬೇಡ, ತೆಗೆದುಕೊಳ್ಳುವುದು ಬೇಡ ಎಂದು ಡಂಗೂರ ಸಾರಿ ಹೇಳಲಾಗುತ್ತಿದೆ. ಅಂತಹದ್ದೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಓಡಾಡುತ್ತಿದೆ. ಕೊರೋನಾ ಮಹಾಮಾರಿ ಹಬ್ಬದ ಉಂಡೆ ತಯಾರಿಕೆಗೂ ಕತ್ತರಿ ಹಾಕಿದ್ದು
ಮಹಿಳೆಯರಲ್ಲಿ ಸಾಕಷ್ಟು ನಿರಾಸೆಗೆ ಕಾರಣವಾಗಿರುವುದಂತೂ ಸತ್ಯ.

ಕಳೆದ ತಿಂಗಳು ಆಚರಿಸಲ್ಪಟ್ಟ ಕಾರ ಹುಣ್ಣಿಮೆಗೂ ಅಂಟಿಕೊಂಡಿದ್ದ ಭಯ ಮುಂಬರುವ ದೀಪಾವಳಿವರೆಗಿನ ಎಲ್ಲ ಹಬ್ಬಗಳ ಆಚರಣೆಗೂ ಅಡ್ಡಿಯಾಗಲಿದೆ. ಈಗಾಗಲೇ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಕೊಕ್ಕೆ ಬಿದ್ದಿದೆ. ಮನೆಯಲ್ಲಿ ಗಣೇಶ ಮೂರ್ತಿ ಸ್ಥಾಪಿಸಿ ಸರಳವಾಗಿ ಗಣೇಶೋತ್ಸವ ಆಚರಿಸುವಂತೆ ಸರ್ಕಾರ ಸೂಚಿಸಿದೆ. ಹಾಗಾಗಿ ಗಣೇಶೋತ್ಸವ ಕೂಡ
ಸರಳವಾಗಿ ಆಚರಣೆಗೆ ಜನತೆ ಈಗಿನಿಂದಲೇ ಮಾನಸಿಕವಾಗಿ ಸಜ್ಜಾಗುತ್ತಿದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com