
ಬೆಂಗಳೂರು: ಕೊರೋನಾ ಲಾಕ್ಡೌನ್ ನಿಂದಾಗಿ 45 ದಿನಗಳಿಗೂ ಹೆಚ್ಚು ಕಾಲ ಬಂದ್ ಆಗಿದ್ದ ಚಿಕ್ಕಪೇಟೆಯಲ್ಲಿ ಎಂದಿನಿಂತೆ ವ್ಯಾಪಾರ ವಹಿವಾಟುಗಳು ಪುನರಾರಂಭಗೊಂಡಿದ್ದು, ಇದರ ನಡುವಲ್ಲೇ ಕೆಲವೊಂದು ನಿರ್ಬಂಧಗಳನ್ನು ಬಿಬಿಎಂಪಿ ಅಧಿಕಾರಿಗಳು ಮುಂದುರೆಸಿದ್ದಾರೆ.
ಚಿಕ್ಕಪೇಟೆ ಪ್ರದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ 45 ದಿನಗಳಿಂದ ಆ ಭಾಗದ ಹಲವು ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶವೆಂದು ಗುರುತಿಸಿ, ಸೀಲ್ಡೌನ್ ಮಾಡಲಾಗಿತ್ತು. ಹೀಗಾಗಿ ಆ ಪ್ರದೇಶದ ವ್ಯಾಪಾರ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದವು.
ಈ ನಡುವೆ ಅಲ್ಲಿನ ವ್ಯಾಪಾರಿ ಸಂಘಟನೆಗಳು ಸೀಲ್ಡೌನ್ ತೆರವುಗೊಳಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದರಂತೆ ವ್ಯಾಪಾರಿಗಳ ಒತ್ತಡಕ್ಕೆ ಮಣಿದ ಬಿಬಿಎಂಪಿಯು ಇದೀಗ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದ್ದು, ಕೆಲವೊಂದು ನಿರ್ಬಂಧಗಳನ್ನು ಮುಂದುವರೆಸಿದೆ.
ಈ ನಡುವೆ ಅಂಗಡಿಗಳನ್ನು ತೆರೆಯಲು ಬಿಬಿಎಂಪಿ ಸಮ-ಬೆಸ ನಿಯಮ ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಎಡಭಾಗದ ಅಂಗಡಿಗಳಿಗೆ ಒಂದು ದಿನ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಟ್ಟರೆ, ಮತ್ತೊಂದು ದಿನ ಬಲಭಾಗದ ಅಂಗಡಿಗಳ ತೆರೆಯಲು ಅವಕಾಶ ಮಾಡಿಕೊಡಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಚಿಕ್ಕಪೇಟೆಯಲ್ಲಿರುವ ಕೆಲ ಜನರು ಕೊರೋನಾ ಪರೀಕ್ಷೆಗೊಳಗಾದ ಸಂದರ್ಭದಲ್ಲಿ ತಪ್ಪಾದ ದೂರವಾಣಿ ಸಂಖ್ಯೆಗಳನ್ನು ನೀಡಿದ್ದು, ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಕ್ಕಪೇಟೆ ಪರಿಸ್ಥಿತಿ ಕುರಿತಂತೆ ಸಂಬಂಧ ಪಟ್ಟಂತಹ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ದಾಖಲೆಗಳಿಗೆ ನೀಡಲಾಗುವ ದೂರವಾಣಿ ಸಂಖ್ಯೆಗಳಿಗೆ ಒಟಿಪಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಅಲ್ಲದೆ, ಬೆಂಗಳೂರು ಕೇಂದ್ರ ವಲಯದ ಅಡಿಯಲ್ಲಿ ಬರುವ ಸ್ಥಳಗಳಲ್ಲಿನ ಅಂಗಡಿಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ವ್ಯಾಪಾರಿಗಳು ಭಾರೀ ನಷ್ಟದಲ್ಲಿದ್ದಾರೆ. ಸೋಂಕು ಹೆಚ್ಚಾಗುತ್ತಿರುವ ನಡುವಲ್ಲೂ ನಾವು ಅಂಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ ಬಳಿಕ ತೆರೆಯುತ್ತಿದ್ದವೆ. ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗುವುದಿಲ್ಲ ಎಂಬುದಕ್ಕೆ ನಾನು ಮುಖ್ಯಮಂತ್ರಿಗಳಿಗೆ ಭರವಸೆ ನೀಡುತ್ತೇನೆಂದು ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಅವರು ಹೇಳಿದ್ದಾರೆ.
Advertisement