ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಳೆ ನೋಟು ಚಲಾವಣೆಗೆ ಯತ್ನ: ಮೂವರು ಆರೋಪಿಗಳನ್ನು ಬಂಧಿಸಿ 30 ಲಕ್ಷ ರೂ. ನೋಟು ವಶ

ನಿಷೇಧಿಸಲ್ಪಟ್ಟ ಹಳೆಯ ನೊಟುಗಳನ್ನು ಚಲಾವಣೆಯಲ್ಲಿರುವ ನೋಟುಗಳಿಗೆ ಕಮಿಷನ್‌ಗಾಗಿ ಸಾರ್ವಜನಿಕರಲ್ಲಿ ವಿನಿಮಯ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗ ಪೊಲೀಸರು, ಆರೋಪಿಗಳಿಂದ 30 ಲಕ್ಷ ರೂ.ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ

ಬೆಂಗಳೂರು: ನಿಷೇಧಿಸಲ್ಪಟ್ಟ ಹಳೆಯ ನೊಟುಗಳನ್ನು ಚಲಾವಣೆಯಲ್ಲಿರುವ ನೋಟುಗಳಿಗೆ ಕಮಿಷನ್‌ಗಾಗಿ ಸಾರ್ವಜನಿಕರಲ್ಲಿ ವಿನಿಮಯ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗ ಪೊಲೀಸರು, ಆರೋಪಿಗಳಿಂದ 30 ಲಕ್ಷ ರೂ.ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರ ನಿವಾಸಿ ಕಿರಣ್ ಕುಮಾರ್, ನಾಗರಬಾವಿ, ಮಾನಸನಗರದ ಪ್ರವೀಣ್ ಕುಮಾರ್ ಬಿ.ಆರ್., ಕಾಮಾಕ್ಷಿಪಾಳ್ಯದ ಪವನ್ ಕುಮಾರ್ ಬಂಧಿತ ಆರೋಪಿಗಳು.

ಜಾಲಹಳ್ಳಿಯ ಎಚ್‌ಎಂಟಿ ಸರ್ವೀಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಕೆನ್ಸಿಂಗ್ಟನ್ ಅಪರ್ಟ್‌ಮೆಂಟ್ ಬಳಿ ಮೂವರು ಆರೋಪಿಗಳು ಮಾರುತಿ ಸುಜುಕಿ ಜೆನ್‌ ಕಾರಿನಲ್ಲಿ 1000 ರೂಪಾಯಿ ಮುಖಬೆಲೆಯ ಹಳೆ ನೋಟುಗಳನ್ನು ತಂದು ಕಮಿಷನ್‌ಗಾಗಿ ಸಾರ್ವಜನಿಕರಿಗೆ ಚಲಾವಣೆ ಮಾಡಲು ಬಂದಿದ್ದಾರೆ ಎಂಬುದರ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ  ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಕಾರಿನಲ್ಲಿ ಒಂದು ಲಗ್ಗೇಜ್‌ ಬ್ಯಾಗಿನಲ್ಲಿ ನಿಷೇಧಿಸಲ್ಪಟ್ಟ 1000 ರೂ.ಮುಖಬೆಲೆಯ 30 ಲಕ್ಷ ರೂ.ಮೌಲ್ಯದ ಹಳೆಯ ನೋಟುಗಳಿದ್ದವು, ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ಈ ಹಣವನ್ನು ಬೆಂಗಳೂರಿನ ಮಾಳಗಾಳದ ನಿವಾಸಿ ಹನುಮಂತೇಗೌಡ ಮತ್ತು ವಿಜಯನಗರದ ನಿವಾಸಿ ಸೋಮಶೇಖರ್ ಎಂಬವರು ತಮಗೆ ಕೊಟ್ಟು, ನೀವು ಸಾರ್ವಜನಿಕರಿಗೆ ಶೇಕಡಾ 10ರಂತೆ ಹೊಸ ನೋಟು ಕೊಟ್ಟು ಹಳೆ ನೋಟುಗಳನ್ನು ಖರೀದಿಸಿದರೆ ನಮಗೆ ರಿಸರ್ವ್ ಬ್ಯಾಂಕ್‌ನಲ್ಲಿ ಅಧಿಕಾರಿಗಳು ಪರಿಚಯವಿದ್ದು, ಈ ಹಳೆ ನೋಟುಗಳನ್ನು ಕಮಿಷನ್‌ಗೆ ತಾವೇ ರಿಸರ್ವ್ ಬ್ಯಾಂಕ್‌ನಲ್ಲಿ ಮೂರು ಪಟ್ಟು ಹೆಚ್ಚಿಗೆ ಅಂದರೆ ಶೇಕಡಾ 30ರಂತೆ ಹೊಸ ನೋಟುಗಳಿಗೆ ಬದಲಾವಣೆ
ಮಾಡಿಸಿಕೊಡುವುದಾಗಿ ಜನರಿಗೆ ನಂಬಿಸಿ ಚಲಾವಣೆ ಮಾಡಲು ಕಳುಹಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಯಶವಂತಪುರ ಉಪ ವಿಭಾಗದ ಸಹಾಯ ಪೊಲೀಸ್ ಆಯುಕ್ತ ಎನ್‌.ಟಿ.ಶ್ರೀನಿವಾಸ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಜಾಲಹಳ್ಳಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಗುರುಪ್ರಸಾದ್, ಸಬ್‌ ಇನ್ಸ್ ಪೆಕ್ಟರ್‌ಗಳಾದ ಲೇಪಾಕ್ಷಮೂರ್ತಿ, ಹರಿನಾಥಬಾಬು, ಮಾರುತಿ, ಸಿಬ್ಬಂದಿ ಶ್ರೀನಿವಾಸಮೂರ್ತಿ, ನರೇಶ್, ರವಿಚಂದ್ರ, ಸರ್ಫರಾಜ್ ನವಾಜ್, ನವೀನ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com