ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ ವೈದ್ಯ ಪ್ರಿಯಾಂಕಾ ಮಂತಗಿ
ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ ವೈದ್ಯ ಪ್ರಿಯಾಂಕಾ ಮಂತಗಿ

ವಿಡಿಯೋ ಕಾಲ್ ಮೂಲಕ ಮಹಿಳೆಗೆ ಹೆರಿಗೆ; ಮಗು, ತಾಯಿ ಇಬ್ಬರೂ ಸುರಕ್ಷಿತ, ಮಹಿಳಾ ಮಣಿಗಳ ಸಾಹಸಕ್ಕೆ ಎಲ್ಲೆಡೆ ಶ್ಲಾಘನೆ!

ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿ ಮಹಿಳೆಗೆ ವೈದ್ಯರು ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
Published on

ಹಾವೇರಿ: ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿ ಮಹಿಳೆಗೆ ವೈದ್ಯರು ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿಯ ಹಾನಗಲ್ ಪಟ್ಟಣದ ವೈದ್ಯರ ರಸ್ತೆ ನಿವಾಸಿಯಾಗಿರುವ ವಾಸವಿ ಪತ್ತೇಪೂರ ಅವರಿಗೆ ಭಾನುವಾರ ಮಧ್ಯಾಹ್ನ ಎರಡೂವರೆ ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ ಆ್ಯಂಬುಲೆನ್ಸ್ ಆಗಮಿಸಲಿಲ್ಲ. ಈ ನಡುವೆ ವಾಸವಿ ಪತ್ತೇಪೂರ ಅವರಿಗೆ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಮಹಿಳೆಯರು ನೆರವಿಗೆ ಆಗಮಿಸಿದ್ದರು. ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಕಾರಣ ಮಹಿಳೆಯರು ತಮಗೆ ಪರಿಚಯವಿದ್ದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಪ್ರಿಯಾಂಕಾ ಮಂತಗಿ ಅವರಿಗೆ ವಿಡಿಯೋ ಕಾಲ್ ಮಾಡಿ ಸಲಹೆ, ಸೂಚನೆ ಪಡೆದುಕೊಂಡಿದ್ದಾರೆ.

ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಹಿನ್ನಲೆಯಲ್ಲಿ ಮಹಿಳೆಯರು ಡಾ.ಪ್ರಿಯಾಂಕಾ ಮಂತಗಿ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಪರಿಸ್ಥಿತಿ ಅರ್ಥೈಸಿಕೊಂಡ ವೈದ್ಯ ಪ್ರಿಯಾಂಕಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ ವಿಡಿಯೋ ಕಾಲ್ ಮೂಲಕ ಮಹಿಳೆಯನ್ನು ಪರೀಕ್ಷಿಸಿ ಮಹಿಳೆಯರಿಗೆ ಹೆರಿಗೆ ಕುರಿತು ಮಾರ್ಗದರ್ಶನ ನೀಡಿದ್ದಾರೆ. ವೈದ್ಯರ ಅನುಪಸ್ಥಿತಿ ನಡುವೆಯೇ ಸ್ಥಳೀಯ ಮಹಿಳೆಯರೇ ವಿಡಿಯೋ ಕಾಲ್ ಮೂಲಕ ವೈದ್ಯರಿಂದ ಸಲಹೆ ಪಡೆದು ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಮಹಿಳಾ ಮಣಿಗಳ ತಂಡ ಯಶಸ್ವಿಯಾಗಿದೆ. ವಾಸವಿ ಪತ್ತೇಪೂರ ಅವರಿಗೆ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. 

ಹೆರಿಗೆ ಬಳಿಕ ತಾಯಿ ಮತ್ತು ಮಗು ಇಬ್ಬರನ್ನು ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದ ಮಧುಲಿಕಾ ದೇಸಾಯಿ, ಅಂಕಿತಾ, ಜ್ಯೋತಿ, ವಿಜಯಲಕ್ಷ್ಮಿ, ಮಾಧುರಿ, ಮುಕ್ತಾ ಹಾಗೂ ಶಿವಲೀಲಾ ಪತ್ತಾರ ಅವರ ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.

ವಿಡಿಯೋ ಕಾಲ್ ಹೆರಿಗೆ ಕುರಿತು ಮಾತನಾಡಿದ ವೈದ್ಯ ಡಾ.ಪ್ರಿಯಾಂಕಾ ಮಂತಗಿ ಅವರು, ಅವರು ನನಗೆ ಕರೆ ಮಾಡಿದಾಗಲೇ ಹೆರಿಗೆ ಪ್ರಕ್ರಿಯೆ ಬಹುತೇಕ ಕೊನೆಯ ಹಂತದಲ್ಲಿತ್ತು. ನಾನು ಕೇವಲ ಹೆರಿಗೆ ಕುರಿತು ಮಾರ್ಗದರ್ಶನ ಮಾಡಿದೆ. ಅಲ್ಲಿದ್ದ ಮಹಿಳೆಯರಿಗೆ ಹೆರಿಗೆ ಪ್ರಕ್ರಿಯೆ ಬಗ್ಗೆ ತಿಳಿದಿತ್ತು. ಹೀಗಾಗಿ ನನ್ನ ಕಾರ್ಯ ಸಲೀಸಾಯಿತು.  ಮಹಿಳೆಯರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು, ಹೆರಿಗೆ ಬಳಿಕ ಕೂಡಲೇ ಮಗು ಮತ್ತು ತಾಯಿಯನ್ನು ಸಮೀಪದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯಲಾಗಿದೆ. ನನ್ನ ವೃತ್ತಿ ಜೀವನದಲ್ಲಿ ಇಂತಹ ಹೆರಿಗೆ ಕಾರ್ಯ ಮೊದಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಮಹಿಳೆಯರ ಸಾಹಸ ಮತ್ತು ವೈದ್ಯರ ಸಮಯ ಪ್ರಜ್ಞೆಯಿಂದ ವಾಸವಿ ಪತ್ತೇಪೂರ ಮತ್ತು ಅವರ ಗಂಡು ಮಗು ಸುರಕ್ಷಿತವಾಗಿದ್ದು, ವೈದ್ಯರಿಗೆ ಮತ್ತು ಮಹಿಳೆಯರ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.  ಈ ಬಗ್ಗೆ ಮಾತನಾಡಿರುವ ಹೆರಿಗೆ ಮಾಡಿಸಿದ ಮಹಿಳೆಯರ ತಂಡದಲ್ಲಿದ್ದ ಮಧುಲಿಕಾ ದೇಸಾಯಿ ಅವರು,  ನಿಜಕ್ಕೂ ಇದು ತುಂಬಾ ಖುಷಿ ನೀಡಿದೆ. ಹುಬ್ಬಳ್ಳಿಯ ಸ್ತ್ರೀರೋಗತಜ್ಞರಾಗಿರುವ ನಮ್ಮ ವೈದ್ಯ ಸ್ನೇಹಿತ ನಮಗೆ ಸಹಾಯ ಮಾಡಿದರು ಎಂದು  ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com