ಹುಲಿ ಗಣತಿ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಎರಡನೇ ಸ್ಥಾನ

ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಅದನ್ನು ಸಂರಕ್ಷಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿ, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವ ಹೆಗ್ಗಳಿಕೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸಲ್ಲುತ್ತದೆ.
ದಮ್ಮನಕಟ್ಟೆ ಅರಣ್ಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹುಲಿ
ದಮ್ಮನಕಟ್ಟೆ ಅರಣ್ಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹುಲಿ

ಚಾಮರಾಜನಗರ: ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಅದನ್ನು ಸಂರಕ್ಷಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿ, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವ ಹೆಗ್ಗಳಿಕೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸಲ್ಲುತ್ತದೆ. ಇಲ್ಲಿ ಹುಲಿಗಳ ವಾಸಸ್ಥಾನಕ್ಕೆ ಬೇಕಾದಂತಹ ಪೂರಕವಾದ ಹವಾಗುಣ, ಪರಿಸರ, ಆಹಾರ ಲಭ್ಯವಿದೆ. 

ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿಯ ಕಾರ್ಯ ನಡೆಸುತ್ತದೆ. ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ನವದೆಹಲಿಯ ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರ್ಟಿ ಹಾಗೂ ಡೆಹ್ರಾಡೂನ್‌ನ ವೈಲ್ಡ್ ಲೈಫ್ ಇನ್‌ಸ್ಟ್ಯೂಟ್ ಆಫ್ ಇಂಡಿಯಾ ಸಹಯೋಗದಲ್ಲಿ 2014ರಲ್ಲಿ ಹುಲಿ ಗಣತಿ ನಡೆದಾಗ ದೇಶದಲ್ಲಿದ್ದ ಒಟ್ಟು 50 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2,226 ಹುಲಿಗಳು ಕಂಡು ಬಂದಿದ್ದವು. 

ಆಗ ಕರ್ನಾಟಕ ರಾಜ್ಯದಲ್ಲಿರುವ 5 ಹುಲಿ ಸಂರಕ್ಷಿತ ಪ್ರದೇಶಗಳಾದ ಭದ್ರ, ಕಾಳಿ (ದಾಂಡೇಲಿ), ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟಾರೆ 406ಕ್ಕೂ ಹೆಚ್ಚು ಹುಲಿಗಳು ಕಂಡುಬಂದಿದ್ದವು. ಇದರಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೊಂದೇ 139ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿದ್ದು, ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಅಂದು ಕಾಯ್ದಿರಿಸಿಕೊಂಡಿತ್ತು.

ಆದರೆ ಅದೃಷ್ಟವಶಾತ್ ಮತ್ತೊಮ್ಮೆ 2018ರಲ್ಲಿ ಎನ್‌ಟಿಸಿಎ ನಿರ್ದೇಶನದ ಮೇರೆಗೆ ಹುಲಿ ಗಣತಿಯು ದೇಶಾದ್ಯಂತ ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ಏಕಕಾಲದಲ್ಲಿ ನಡೆದಾಗ, ಆ ಸಾಲಿನ ಪಟ್ಟಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನಮಂತ್ರಿ ನರೇಂದ್ರ ಮೋದಿರವರು 2019ರಲ್ಲಿ ಬಿಡುಗಡೆ ಮಾಡಿದಾಗ ಮದ್ಯಪ್ರದೇಶವು ಒಟ್ಟಾರೆ 428 ಹುಲಿಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಕರ್ನಾಟಕ ರಾಜ್ಯವು ಒಟ್ಟಾರೆ 426 ಹುಲಿಗಳೊಂದಿಗೆ ಎರಡನೇ ಸ್ಥಾನಕ್ಕೆ ಕೇವಲ ಎರಡು ಹುಲಿಗಳ ಅಂತರದಲ್ಲಿ ದೂಡಲ್ಪಟ್ಟಿತ್ತು. 

2010ನೇ ಸಾಲಿನಿಂದೀಚಿಗೆ ಪ್ರತಿ ವರ್ಷ ಜುಲೈ 29ರಂದು ವಿಶ್ವ ಹುಲಿ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಹುಲಿಯನ್ನು ಒಳಗೊಂಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನೆನ್ನೆ ವಿಶ್ವ ಹುಲಿ ದಿನಾಚರಣೆ ಹಾಗೂ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 

ಹುಲಿ ದಿನಾಚರಣೆಯ ಅಂಗವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆಯ ಸಿಬ್ಬಂದಿ ಬಂಡೀಪುರದಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಕಳೆ ಗಿಡಗಳನ್ನು ತೆರವುಗೊಳಿಸುವುದರ ಮೂಲಕ ಶ್ರಮದಾನ ಮಾಡಿದರು. ನಂತರ ಸಿಬ್ಬಂದಿ ವರ್ಗದವರೆಲ್ಲರಿಗೂ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ ಹಾಗೂ ವಿವಿಧ ಛಾಯಾಚಿತ್ರ ಸಂಘ ಸಂಸ್ಥೆಗಳು ಹಾಗೂ ವನ್ಯಜೀವಿ ಛಾಯಾಗ್ರಹಾಕರು ಸೆರೆಹಿಡಿದಿದ್ದ ಸಾಕ್ಷ್ಯಾಚಿತ್ರಗಳನ್ನು ತೋರಿಸುವುದರ ಮೂಲಕ ಹುಲಿಯನ್ನು ಸಂರಕ್ಷಿಸುವ ಹಾಗೂ ಪೋಷಿಸುವ ಬಗ್ಗೆ ಅರಿವು ಮೂಡಿಸಲಾಯಿತು. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಲಯ ಅರಣ್ಯಾಧಿಕಾರಿ ಮುನಿರಾಜು ಮಾತನಾಡಿ ಪ್ರತಿವರ್ಷ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶ್ವ ಹುಲಿ ದಿನಾಚರಣೆಯನ್ನು 2010ರಿಂದೀಚಿಗೆ ಆಚರಿಸುತ್ತಿದ್ದೇವೆ. ಹುಲಿಯನ್ನು ಸಂರಕ್ಷಿಸುವುದು ಹಾಗೂ ಪರಿಸರ ಸಮತೋಲನದಲ್ಲಿ ಹುಲಿ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.

ವರದಿ: ಗೂಳಿಪುರ ನಂದೀಶ ಎಂ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com