ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾಳೆ ವರ ಮಹಾಲಕ್ಷ್ಮೀ ಹಬ್ಬ: 'ಕೊರೋನಾ' ನಡುವೆ ವ್ಯಾಪಾರ ಭರಾಟೆಯಲ್ಲಿ ಬೆಂಗಳೂರಿಗರು!

ಶ್ರಾವಣ ಮಾಸದಲ್ಲಿ ಬರುವ ವರ ಮಹಾಲಕ್ಷ್ಮೀ ಹಬ್ಬ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದವರಿಗೆ ಅತ್ಯಂತ ಸಂಭ್ರಮ-ಸಡಗರ ವಿಜೃಂಭಣೆಯಿಂದ ಆಚರಿಸುವ ಹಬ್ಬ.

ಬೆಂಗಳೂರು: ಶ್ರಾವಣ ಮಾಸದಲ್ಲಿ ಬರುವ ವರ ಮಹಾಲಕ್ಷ್ಮೀ ಹಬ್ಬ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದವರಿಗೆ ಅತ್ಯಂತ ಸಂಭ್ರಮ-ಸಡಗರ ವಿಜೃಂಭಣೆಯಿಂದ ಆಚರಿಸುವ ಹಬ್ಬ. ನಾಳೆ ರಾಜ್ಯಾದ್ಯಂತ ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ವರ ಮಹಾಲಕ್ಷ್ಮೀ ವೃತ ಮಾಡಿ, ದೇವರಿಗೆ ಪೂಜೆ, ನೈವೇದ್ಯ ಅರ್ಪಿಸಿ, ಹೊಸ ಬಟ್ಟೆ ತೊಟ್ಟು, ವಿವಿಧ ಖಾದ್ಯ, ಸಿಹಿ ತಿನಿಸುಗಳನ್ನು ಮಾಡಿ ದೇವರಿಗೆ ಸಮರ್ಪಿಸಿ ನಂತರ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ತಿಂದು ಸಂಭ್ರಮಿಸುವ ದಿನ.

ಈ ಬಾರಿ ಕೊರೋನಾ ವೈರಸ್ ಕಾರಣದಿಂದ ಜನರು ಹೊರಗೆ ಓಡಾಡಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಹಬ್ಬಕ್ಕೆ ಖರೀದಿಯೆಂದು ಮಾರುಕಟ್ಟೆಗೆ ಮುಗಿಬೀಳಬೇಡಿ, ಮನೆಯಲ್ಲಿಯೇ ಸರಳವಾಗಿ ಆಚರಿಸಿ ಎಂದು ಪಾಲಿಕೆಗಳು ಜನರನ್ನು ಎಷ್ಟೇ ಮನವಿ ಮಾಡಿಕೊಂಡರು ಬಹುತೇಕ ಮಂದಿ ಕೇಳುತ್ತಿಲ್ಲ.

ನಾಳೆ ಹಬ್ಬಕ್ಕೆಂದು ಇಂದು ಬೆಂಗಳೂರಿನ ಅಲ್ಲಲ್ಲಿ ಜನರು ಬೆಳ್ಳಂಬೆಳಗ್ಗೆ ಹೊರಬಂದು ಹೂವು, ಹಣ್ಣು, ತರಕಾರಿ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು. ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಕೆಳಗೆ, ಯಶವಂತಪುರ, ಮತ್ತಿಕೆರೆ, ಮೈಸೂರು ರಸ್ತೆ ಹೀಗೆ ಅಲ್ಲಲ್ಲಿ ಗುಂಪುಕಟ್ಟಿ, ಸಾಲು ಸಾಲಾಗಿ ಬಂದು ಜನ ಖರೀದಿಯಲ್ಲಿ ತೊಡಗಿದ್ದಾರೆ, ಕೊರೋನಾ ಸೋಂಕಿನ ಭೀತಿಯ ನಡುವೆಯೇ ಮಾರುಕಟ್ಟೆಯಲ್ಲಿ ಜನಜಂಗಳಿ ಸೇರುವುದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟುಹಾಕಿದೆ. 

ನಗರದ ಕೃಷ್ಣರಾಜ ಮಾರುಕಟ್ಟೆಯ ಸಗಟು ಹೂವಿನ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ವ್ಯಾಪಾರ ವಹಿವಾಟಿಗೆ ಪಾಲಿಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ನಗರದ ಹೊರವಲಯ ಹಾಗೂ ಪ್ರಮುಖ ಬಡಾವಣೆಗಳಲ್ಲಿ ವ್ಯಾಪಾರಕ್ಕೆ ಕೆಲ ವರ್ತಕರು ಮುಂದಾಗಿದ್ದಾರೆ.

ರೈತರು ಬೆಳೆದ ಹೂವುಗಳನ್ನು ಸೀಗೆಹಳ್ಳಿ, ಮಹಾಲಕ್ಷ್ಮೀ ಲೇಔಟ್, ಆವಲಹಳ್ಳಿ, ಕೆ.ಆರ್. ಪುರ, ಸಿದ್ದಾಪುರ, ಯಲಹಂಕ , ಮೈಸೂರು ರಸ್ತೆ, ಕನಕಪುರ ರಸ್ತೆ ಸೇರಿ ನಗರದ ಬಹುತೇಕ ಪ್ರದೇಶಗಳಲ್ಲಿ ವರ್ತಕರು ಹಾಗೂ ನೇರವಾಗಿ ರೈತರು ತಾವು ಬೆಳೆದ ಬೆಳೆಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಬೆಲೆ ಹೆಚ್ಚಾಗಿದೆ.  ನಗರದ ಹಲವು ಕಡೆಗಳಲ್ಲಿ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ಹೂವು, ಹಣ್ಣುಗಳನ್ನು ದುಪ್ಪಟ್ಟು ಬೆಲೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com