ಶಿವಾಜಿನಗರ-ಕಂಟೋನ್ಮೆಂಟ್ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಗೆ ಮುಖ್ಯಮಂತ್ರಿ ಚಾಲನೆ

ಶಿವಾಜಿನಗರದ ಅಬ್ದುಲ್ ಬಾರಿ ಹೈಸ್ಕೂಲ್ ಮೈದಾನದ ಸುಲ್ತಾನ್‌ ಗುಂಟಾ ಬಳಿ ಮೆಟ್ರೋ ರೈಲು ನಿಗಮ ಆಯೋಜಿಸಿರುವ ಬೆಂಗಳೂರು ಮೆಟ್ರೊ ಹಂತ-2 ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಚಾಲನೆ ನೀಡಿದರು.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Updated on: 

ಬೆಂಗಳೂರು: ಶಿವಾಜಿನಗರದ ಅಬ್ದುಲ್ ಬಾರಿ ಹೈಸ್ಕೂಲ್ ಮೈದಾನದ ಸುಲ್ತಾನ್‌ ಗುಂಟಾ ಬಳಿ ಮೆಟ್ರೋ ರೈಲು ನಿಗಮ ಆಯೋಜಿಸಿರುವ ಬೆಂಗಳೂರು ಮೆಟ್ರೊ ಹಂತ-2 ಕಂಟೋನ್ಮೆಂಟ್  ರೈಲ್ವೆ ನಿಲ್ದಾಣದಿಂದ ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು, ಕ್ಷಿಪ್ತ ಗತಿಯಲ್ಲಿ ಪ್ರಯಾಣಿಕರನ್ನು ಅವರ ಗಮ್ಯ ಸ್ಥಳಕ್ಕೆ ತಲುಪಿಸುವ ನಿಟ್ಟಿನಲ್ಲಿ ಮೆಟ್ರೋ ರೈಲು ಅತ್ಯುತ್ತಮ ಸೇವೆ ಒದಗಿಸುತ್ತಿದೆ. ಮೆಟ್ರೋ ಹಂತ 2ರ ಭಾಗವಾಗಿ ಕೊಟ್ಟಿಗೆರೆಯಿಂದ ನಾಗವಾರದವರೆಗೆ 21.40 ಕಿ.ಮೀ.ಉದ್ದದ ಹೊಸ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಶಿವಾಜಿನಗರ ನಿಲ್ದಾಣದಿಂದ ಕಂಟೋನ್ಮೆಂಟ್‌ ನಿಲ್ದಾಣದ ಕಡೆಗೆ 855 ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದ್ದು, ಇದನ್ನು ಲಾರ್ಸನ್ ಮತ್ತು ಟೌಬ್ರೊ ಲಿಮಿಟೆಡ್ ಸಂಸ್ಥೆಯವರಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಸುರಂಗ ಕೊರೆಯಲು ಉರ್ಜಾ ಮತ್ತು ವಿಂಧ್ಯ ಎಂದು ಹೆಸರಿನ ಎರಡು ಟಿಎಂಬಿ ಯಂತ್ರಗಳು ಸಿದ್ಧವಾಗಿದ್ದು, ಇವುಗಳ ಪುನರ್ ಜೋಡಣೆ ಕಾರ್ಯದ ನಂತರ ಸ್ಥಳ ಪರೀಕ್ಷೆ ಪೂರ್ಣಗೊಳಿಸಿ ಸುರಂಗ ಕಾಮಗಾರಿ ಆರಂಭಗೊಳ್ಳಲಿದೆ.  ಹೊಸ ಮಾರ್ಗದಲ್ಲಿ 7.5 ಕಿ.ಮೀ. ಎಲಿವೇಟೆಡ್ ಕಾರಿಡಾರ್ ಇದ್ದು, 6 ಎಲಿವೇಟೆಡ್ ನಿಲ್ದಾಣಗಳನ್ನು ಹೊಂದಿದೆ. 12 ನೆಲದಡಿಯ ನಿಲ್ದಾಣಗಳು ಇರಲಿವೆ. 10.37 ಕಿ.ಮೀ. ಅವಳಿ ಸುರಂಗ ಮಾರ್ಗಗಳನ್ನು ಹೊಂದಿದೆ. ಶೀಘ್ರ ನಿರ್ಮಾಣದ ಸಲುವಾಗಿ 4 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಮೆಟ್ರೋ 2ನೆ ಹಂತದ ಒಟ್ಟು ವೆಚ್ಚ 30,695 ಕೋಟಿ ರೂಪಾಯಿ ಆಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್-ಕೆ.ಆರ್.ಪುರಂ-  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುವುದು. ಇದರ ಕಾಮಗಾರಿಯ ವೆಚ್ಚ 9,934.58 ಕೋಟಿ  ರೂಪಾಯಿಯಾಗಿದ್ದು, ಯೋಜನೆ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮೆಟ್ರೋ 2ನೇ ಹಂತದ ಎಲ್ಲಾ ಕಾಮಗಾರಿಗಳು ಪ್ರಾರಂಭವಾಗಿದ್ದು, 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಗುರುತಿಸಿಕೊಂಡಿದೆ. ಈ ಮಾನ್ಯತೆಗೆ ತಕ್ಕಂತೆ ಮೂಲಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ನಿನ್ನೆಯಷ್ಟೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಂಗಳೂರು ಲೈಫ್ ಸೈನ್ಸಸ್‌ ಪಾರ್ಕ್‌ ಗೆ ಭೂಮಿಪೂಜೆ ನೆರವೇರಿಸಲಾಗಿದೆ. ಇದು ಬೆಂಗಳೂರು ನಗರವನ್ನು ಜಾಗತಿಕ ಜೈವಿಕ ತಂತ್ರಜ್ಞಾನದ ಹಬ್‌ ಆಗಿ ಸ್ಥಾಪಿಸಲು ಸಹಕಾರಿಯಾಗಲಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಮತ್ತು ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣ ಯೋಜನೆಯನ್ನು 1500 ಕೊಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಸುಗಮ ಸಂಚಾರ ವ್ಯವಸ್ಥೆಯ ಅವಿಭಾಜ್ಯ ಅಂಗವಾದ ಉತ್ತಮ ರಸ್ತೆಗಳ ಜಾಲ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 456.5 ಕೋಟಿ ರೂ.ವೆಚ್ಚದಲ್ಲಿ ನಗರದ ವಿವಿಧ ಭಾಗದ ರಸ್ತೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. 28.56 ಕಿ.ಮೀ.ಉದ್ದದ 36 ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಲಾಗುತ್ತಿದೆ. ಸದ್ಯ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದರ ಜೊತೆಗೆ ಮೂಲಸೌಲಭ್ಯವನ್ನು ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು. ನಿಗದಿತ ವೇಳೆಯಲ್ಲಿ ಪೂರ್ಣಗೊಂಡು ನಗರದ ಸಂಚಾರದ ದಟ್ಟಣೆ ನಿವಾರಣೆಯಾಗಲಿ ಎಂದು ಮುಖ್ಯಮಂತ್ರಿ ಆಶಿಸಿದರು.

ಸಮುದ್ರ ಮಾರ್ಗದ ಮೂಲಕ ಆಗಮಿಸಿದ ಉರ್ಜಾ, ವಿಂಧ್ಯ; 
ಕಂಟೋನ್ಮೆಂಟ್‌ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗದ ಯೋಜನೆಯ 2ನೇ ಹಂತದ ಸುರಂತ ಮಾರ್ಗವು ಜಯನಗರ ಅಗ್ನಿಶಾಮಕ ಕೇಂದ್ರದ ಸಮೀಪವಿರುವ ದಕ್ಷಿಣ ರಾಂಪ್‌ನಿಂದ ನಾಗವಾರ ನಿಲ್ದಾಣದ ಬಳಿಯ ಉತ್ತರ ರಾಂಪ್‌ವರೆಗೆ 13.9 ಕಿ.ಮೀ.ಸುರಂಗ ಮಾರ್ಗದ ಕಾರಿಡಾರ್‌ ಅನ್ನು ಒಳಗೊಂಡಿದೆ.

ಇದರಲ್ಲಿ 12 ನೆಲದಡಿಯ ನಿಲ್ದಾಣಗಳು ಹಾಗೂ 10.37 ಕಿ.ಮೀ. ಅವಳಿ ಸುರಂಗ ಮಾರ್ಗಗಳನ್ನು ಹೊಂದಿರುತ್ತದೆ. ಸಂಪೂರ್ಣ ಸುರಂಗ ಮಾರ್ಗದ ನಿರ್ಮಾಣ ಕೆಲಸವನ್ನು ನಾಲ್ಕು ಪ್ಯಾಕೇಜ್‌ಗಳಾಗಿ ಅಂದೆ ಆರ್‌ಟಿ 01, ಆರ್‌ಟಿ02, ಆರ್‌ಟಿ 3, ಆರ್‌ಟಿ 4 ಎಂದು ವಿಂಗಡಿಸಲಾಗಿದೆ.

ಆರ್‌ಟಿ ಪ್ಯಾಕೇಜ್‌ನಲ್ಲಿ ಕಂಟೋನ್ಮೆಂಟ್‌ ನಿಲ್ದಾಣದಿಂದ ಶಿವಾಜಿನಗರ ನಿಲ್ದಾಣಕ್ಕೆ ಮತ್ತು ಕಂಟೋನ್ಮೆಂಟ್ ನಿಲ್ದಾಣದಿಂದ ಟ್ಯಾನರಿ ರಸ್ತೆಯಲ್ಲಿರುವ ಶಾದಿಮಹಲ್ ಶಾಪ್ಟ್‌ವರೆಗೆ 2.88 ಕಿ.ಮೀ. ಉದ್ದದ ಸುರಂಗ ಮಾರ್ಗ ಮತ್ತು ಕಂಟೋನ್ಮೆಂಟ್‌ ಮತ್ತು ಪಾಟರಿ ಟೌನ್‌ ನೆಲದಡಿ ನಿಲ್ದಾಣಗಳ ಕಾಮಗಾರಿ ಒಳಗೊಂಡಿರುತ್ತದೆ. ಮೇಲಿನ ಸುರಂಗ ಮಾರ್ಗದ ಕೆಲಸಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಾದ ಮೆ.ಲಾರ್ಸೆನ್ ಮತ್ತು ಟೌಬ್ರೊ ಲಿಮಿಟೆಡ್ ಅವರಿಗೆ ವಹಿಸಿದ್ದು, ಗುತ್ತಿಗೆದಾರರು ಎರಡು ಕೊಳೆ ಆಧಾರಿತ ಸುರಂಗ ಕೊರೆಯುವ ಯಂತ್ರಗಳನ್ನು-ಟಿಬಿಎಂ ವ್ಯವಸ್ಥೆಗೊಳಿಸಿದ್ದಾರೆ. ಮೆಸರ್ಸ್ ಸಿಆರ್‌ಸಿಐಯಿಂದ ಖರೀದಿಸಿದ ಟಿಬಿಎಂಗಳು ಸಮುದ್ರ ಮಾರ್ಗದ ಮೂಲಕ ಚೆನ್ನೈ ಬಂದರಿಗೆ ತಲುಪಿ ನಂತರ ಮಾರ್ಚ್ 2020ರ ವೇಳೆಗೆ ಬೆಂಗಳೂರು ತಲುಪಿದೆ. ಈ ಎರಡು ಟಿಎಂಬಿಗಳಿಗೆ ಉರ್ಜಾ ಮತ್ತು ವಿಂಧ್ಯ ಎಂದು ಹೆಸರಿಡಲಾಗಿದೆ.

ಉರ್ಜಾ ಹೆಸರಿನ ಟಿಬಿಎಂ ಕಂಟೋನ್ಮೆಂಟ್ ಮತ್ತು ಶಿವಾಜಿನಗರ ನಡುವಿನ ಸುರಂಗ ಮರ್ಗ (ಉತ್ತರಕ್ಕೆ ಸುರಂಗ) ಕೊರೆಯಲಿದೆ. ಈ ಸುರಂಗ ಮಾರ್ಗವು ಭೂ ಸಮೀಕ್ಷೆಯ ಅಂದಾಜಿನ ಪ್ರಕಾರ ಸುಮಾರು 250 ಮೀಟರ್ ಗಟ್ಟಿಬಂಡೆ, ಸುಮಾರು 350 ಮೀಟರ್ ಮಿಶ್ರ ಭೂಮಿ ಮತ್ತು ಸುಮಾರು 255 ಮೀಟರ್ ಮಣ್ಣಿನಿಂದ ಕೂಡಿರುತ್ತದೆ. ಮೊದಲ ಟಿಬಿಎಂ (ಉರ್ಜಾ)ಅಗತ್ಯವಾದ ಅಂತರ ಗತಿಸಿದ ನಂತರ ಎರಡನೇ ಟಿಬಿಎಂ (ವಿಂಧ್ಯ) ಕಾರ್ಯಾರಂಭಗೊಳ್ಳುತ್ತದೆ.

2ನೇ ಹಂತದ ವಿಸ್ತರಣಾ ಮಾರ್ಗಗಳಾದ ರೀಚ್ 4 ಯಲಚೇನಹಳ್ಳಿಯಿಂದ ಅಂಜನಾಪುರದವರೆಗೆ ಈ ವರ್ಷದ ನವೆಂಬರ್ ವೇಳೆಗೆ, ರೀಚ್ 2 ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ 2021 ಫೆಬ್ರವರಿ, ರೀಚ್ 3 ನಾಗಸಂದ್ರದಿಂದ ಬಿಐಇಸಿವರೆಗೆ 2022ರ ಜನವರಿ, ರೀಚ್ 1 ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ ವರೆಗೆ 2022 ಜೂನ್ ನಲ್ಲಿ ಪೂರ್ಣಗೊಳ್ಳಲಿದೆ.

ಹೊಸ ಮಾರ್ಗಗಳಾದ ರೀಚ್ 5 ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ 2022 ಮಾರ್ಚ್ ಮತ್ತು ರೀಚ್ 6 ಕಾಳೇನಾ ಅಗ್ರಹಾರದಿಂದ ನಾಗವಾರಕ್ಕೆ 2024 ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ರೈಲು ಮೆಟ್ರೋ ರೈಲ್ ನಿಗಮ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com