ಕಾಯಕ ಯೋಗಿ ಮೋದಿಯಿಂದ ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ: ಯಡಿಯೂರಪ್ಪ ಬಣ್ಣನೆ

ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿಯವರು ಹಲವು ದಶಕಗಳಿಂದ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದು, ಕಾಯಕ ಯೋಗಿಯಾಗಿ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣ್ಣಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ

ಬೆಂಗಳೂರು: ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿಯವರು ಹಲವು ದಶಕಗಳಿಂದ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದು, ಕಾಯಕ ಯೋಗಿಯಾಗಿ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಯಡಿಯೂರಪ್ಪ, ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದರು.

ದೇಶದ ಶೇ‌.70 ರಷ್ಟು ಜನರ ಅಪೇಕ್ಷೆ, ಮತ್ತೊಂದು ಅವಧಿಗೆ ಮೋದಿ ಅವರು ಪ್ರಧಾನಿಯಾಗಬೇಕು ಎಂಬುದಾಗಿತ್ತು. ಆಗ ಮಾತ್ರ ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎನ್ನುವ ಭಾವನೆ ಜನರಲ್ಲಿತ್ತು. ಐದು ವರ್ಷಗಳ ಆಡಳಿತದಲ್ಲಿ ಜನಧನ್, ಆಯಷ್ಮಾನ್ ಭಾರತ್, ಜನರಿಕ್, ಬೇವು ಮಿಶ್ರಿತ ರಸಗೊಬ್ಬರ, ಮುದ್ರಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿ ಹಲವಾರು ಕಾರ್ಯಕ್ರಮ ರೂಪಿಸಿ ದೇಶದ ಅಭಿವೃದ್ಧಿ ಗೆ ಶ್ರಮಿಸಿದ ಮೋದಿ ಅವರು ಎರಡನೇ ಬಾರಿಗೆ ಚುನಾವಣೆ ಎದುರಿಸಿದರು. ದೇಶದ ಜನತೆ 2019 ರಲ್ಲಿ ಬಿಜೆಪಿಗೆ‌ 303, 353 ಸ್ಥಾನ ಎನ್ ಡಿಎ ಗೆ ನೀಡಿ ಸ್ಥಿರ ಸರ್ಕಾರ ರಚಿಸಲು ಆಶೀರ್ವಾದ ಮಾಡಿದರು ಎಂದು ನೆನಪಿಸಿದರು.

ರಾಜ್ಯದಲ್ಲಿ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಎಚ್‌.ಡಿ. ದೇವೇಗೌಡರಂತಹ ನಾಯಕರು ಕೂಡ ಮೋದಿ ಅಲೆಯಲ್ಲಿ ಸೋಲನ್ನು ಅನುಭವಿಸಿದರು. ರಾಜ್ಯದಲ್ಲಿ ಬಿಜೆಪಿ 25 ಸ್ಥಾನ ಗೆಲ್ಲಲು ಕಾರಣವಾಯಿತು ಎಂದು ಯಡಿಯೂರಪ್ಪ ಹೇಳಿದರು.

ಎರಡನೇ ಅವಧಿಯ ಆರಂಭದಲ್ಲೇ ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ‌ ಸುವರ್ಣ ಯುಗ ಆರಂಭವಾಗಿದೆ. ರಾಮಮಂದಿರ ತೀರ್ಪಿಗಾಗಿ ನಿರಂತರ ಕಾನೂನು ಹೋರಾಟ ಮಾಡಿದರು. ಇದರಿಂದ ದಶಕಗಳ ಕಾಲ ಬಾಕಿ ಉಳಿದಿದ್ದ ತೀರ್ಪು ಹೊರಬಿತ್ತು. ನೂರಾರು ವರ್ಷಗಳಿಂದ ಜಾರಿಯಲ್ಲಿದ್ದ ತ್ರಿವಳಿ ತಲಾಖ್ ಎಂಬ ಕೆಟ್ಟ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲಾಯಿತು. ಉಗ್ರರನ್ನು ನಿಗ್ರಹಿಸಲಾಯಿತು. ಉಗ್ರರ ಬೆಂಬಲಕ್ಕೆ ಇದ್ದ ಸೌಲಭ್ಯ ಬಂದ್ ಮಾಡಿ, ಕಠಿಣ ಕಾನುನು ಜಾರಿ ಮಾಡಲಾಯಿತು ಎಂದು ಹೇಳಿದರು.

ಬ್ಯಾಂಕ್ ಸುಧಾರಣೆಗಾಗಿ ಸಣ್ಣಪುಟ್ಟ ಬ್ಯಾಂಕ್ ವಿಲೀನಗೊಳಿಸಲಾಯಿತು. ಮಕ್ಕಳ ದೌರ್ಜನ್ಯಕ್ಕೆ ಕಠಿಣ ಕಾನೂನು ಜಾರಿಗೊಳಿಸಲಾಯಿತು. ಜಮ್ಮು ಕಾಶ್ಮೀರ ‌ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ರದ್ದುಗೊಳಿಸಲಾಯಿತು. ವಿದೇಶದಲ್ಲಿ ನೆಲೆ ಇಲ್ಲದ ನಿರಾಶ್ರಿತರಿಗೆ ಸಿಎಎ ಮೂಲಕ ಅಭಯ ಹಸ್ತ ನೀಡಲಾಯಿತು. ವಾಹನ ಅಪಘಾತ‌ ತಗ್ಗಿಸಲು ರಸ್ತೆ ಸುರಕ್ಷತಾ ಕಾಯ್ದೆ ಜಾರಿಗೆ ತರಲಾಯಿತು. ರೈತರ, ಸಾಮಾನ್ಯ ಜನರು, ಕೈಗಾರಿಕಾ ವಲಯಕ್ಕೆ ಯೋಜನೆ ರೂಪಿಸಲಾಯಿತು. ಕಿಸಾನ್ ಸಮ್ಮಾನ್ ಯೋಜನೆ, ಜಲ ಜೀವನ್ ಮಿಷನ್, ಅಸಂಘಟಿತ ಕಾರ್ಮಿಕ ವಲಯಕ್ಕೆ ಪಿಂಚಣಿ ವ್ಯವಸ್ಥೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಮೋದಿಯುವರು ಜಾರಿಗೆ ತಂದರು ಎಂದು ಯಡಿಯೂರಪ್ಪ ಹೇಳಿದರು.

ಮಹಾಮಾರಿ ಕೋರನಾದಿಂದ ದೇಶಕ್ಕೆ ರಕ್ಷಣೆ ನೀಡುವಲ್ಲಿ ಪ್ರಧಾನಿ ಯಶಸ್ವಿಯಾಗಿದ್ದಾರೆ. ದೇಶದ ಜನರ ಜೀವ, ಜೀವನ ರಕ್ಷಣೆ ಮಾಡಿದ‌ ಕೀರ್ತಿ ಮೋದಿ ಅವರಿಗೆ ಸಲ್ಲಲಿದೆ. ಕೊರೋನಾಗೆ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿದ್ದಾರೆ. 8 ಲಕ್ಷ ಆಹಾರ ಪದಾರ್ಥಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ರಾಜ್ಯ ಕೂಡ 1610 ಕೋಟಿ, ರೂ. ಪ್ಯಾಕೇಜ್ ಘೋಷಣೆ ಮಾಡಿದೆ. ಇದಾದ ಬಳಿಕ 137ಕೋಟಿ, ಮತ್ತೆ 500 ಕೋಟಿ ಮೂರು ಪ್ಯಾಕೇಜ್ ನೀಡಿದೆ. ಕೋವಿಡ್ ನಿಯಂತ್ರಣ ನನ್ನ ಕೆಲಸ ಅದರಲ್ಲಿ ನಿರತನಾಗಿದ್ದೇನೆ, ಬೇರೆ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪಕ್ಷದಲ್ಲಿ ಉಂಟಾದ ಬಂಡಾಯ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.

ಕೆಲ ಬಿಜೆಪಿ ನಾಯಕರು ಯಡಿಯೂರಪ್ಪ ನಮ್ಮ ನಾಯಕರಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ದೇಶದಲ್ಲೇ ಆರ್ಥಿಕ ಸಮಸ್ಯೆ ಇದೆ ಹಾಗಾಗಿ ಅನುದಾನ ಕಡಿಮೆ ಬಿಡುಗಡೆ ಆಗಿದೆ. ಮುಂದೆ ಆರ್ಥಿಕ ಸ್ಥಿತಿ ಸರಿಯಾಗುವ ವಿಶ್ವಾಸವಿದೆ. ಮುಂದೆ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com