ಕ್ವಾರಂಟೈನ್‌ ಗೆ ಒಳಗಾಗದೆ ಪರಾರಿಯಾಗಿದ್ದವರು ವಶಕ್ಕೆ: ಕ್ವಾರಂಟೈನ್ ಕೇಂದ್ರಕ್ಕೆ ರವಾನೆ

ಮುಂಬೈಯಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಗೆ ಒಳಗಾಗದೇ ಆಟೋದಲ್ಲಿ ಪರಾರಿಯಾಗಿದ್ದ ಪ್ರಯಾಣಿಕರಿಬ್ಬರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಂಬೈಯಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಗೆ ಒಳಗಾಗದೇ ಆಟೋದಲ್ಲಿ ಪರಾರಿಯಾಗಿದ್ದ ಪ್ರಯಾಣಿಕರಿಬ್ಬರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಿದ್ದಾರೆ. 

ಕೆಂಪೇಗೌಡ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಈ ಘಟನೆ ನಡೆದಿತ್ತು. ಮುಂಬೈನಿಂದ ಆಗಮಿಸಿದ್ದ ಪ್ರಯಾಣಿಕರು ಪರಾರಿಯಾಗಿದ್ದು, ಅವರು ತಾವಾಗಿಯೇ ಬಂದು ಕ್ವಾರಂಟೈನ್ ಆಗಬೇಕು, ಇಲ್ಲದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಎಚ್ಚರಿಕೆ ನೀಡಿದ್ದರು.

ವಿಷಯ ಬೆಳಕಿಗೆ ಬರುತ್ತಿದ್ದಂತೆ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಚೇಸ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಬಲೆಗೆ ಬೀಳುತ್ತಿದ್ದಂತೆ ಬಿಬಿಎಂಪಿ ‌ಅಧಿಕಾರಿಗಳು ಇಬ್ಬರೂ ಪ್ರಯಾಣಿಕರ ಕೈಗೆ ಸೀಲ್ ಹಾಕಿ‌ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಇನ್ನೂ, ಹಲವು ಪ್ರಯಾಣಿಕರು ಪರಾರಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನೆಯ ಹಿನ್ನೆಲೆ: 
ಲಾಕ್ ಡೌನ್ ಆದ ನಂತರ ಸುಮಾರು 2 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಉದ್ಯಾನ್ ಎಕ್ಸ್‌ಪ್ರೆಸ್ ಆಗಮಿಸಿದ್ದು, ಮುಂಬೈನಿಂದ 1,734 ಪ್ರಯಾಣಿಕರು ಆಗಮಿಸಿದ್ದಾರೆ.ಕೊರೋನಾ  ಸೋಂಕು ಭೀತಿ ಹಿನ್ನೆಲೆಯಲ್ಲಿ ರೈಲಿನಲ್ಲಿ ಆಗಮಿಸಿದ್ದ ಪ್ರತಿಯೊಬ್ಬರ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಿದ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಆದರೆ, ಕ್ವಾರಂಟೈನ್ ಮಾಡುವ ವಿಚಾರದಲ್ಲಿ ಅಧಿಕಾರಿಗಳ ಅಜಾಗರೂಕತೆಯಿಂದ ಸೂಕ್ತ ಭದ್ರತೆವಿಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಕ್ವಾರಂಟೈನ್​ನಲ್ಲಿರಬೇಕಾಗಿದ್ದವರು ಇಬ್ಬರು ಪ್ರಯಾಣಿಕರು ಕೆಎ 02, 9780 ನೋಂದಣಿಯ ಆಟೋದಲ್ಲಿ ಪರಾರಿಯಾಗಿದ್ದು, ಹಿರಿಯ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕೆಂಡಮಂಡಲವಾಗಿದ್ದಾರೆ.

ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಅವರನ್ನು ಕರೆತರಲು ಬುಲೆಟ್​ ಬೈಕ್​ ಹತ್ತಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ಅವರನ್ನು ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದಾರೆ.

ಮುಂಬೈನಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಯಾದಗಿರಿ, ಕಲಬುರಗಿ ಮಾರ್ಗದಲ್ಲಿ ಬೆಂಗಳೂರಿಗೆ ತಲುಪಿತು. ಹೀಗಾಗಿ ರೈಲಿನಲ್ಲಿ ರಾಜ್ಯದ ಕಾರ್ಮಿಕರು ಬಂದಿದ್ದಾರೆ ಎಂದು ಭಾವಿಸಿ ಪೊಲೀಸರು ಎಡವಟ್ಟುಮಾಡಿಕೊಂಡಿದ್ದು ಈ ಸಂದರ್ಭದಲ್ಲಿ ಮುಂಬೈನಿಂದ ಬಂದವರನ್ನು ಪೊಲೀಸರು ಬಿಟ್ಟಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಅಸಮಾಧಾನಗೊಂಡಿದ್ದರು.

ಅಲ್ಲದೇ, ಮುಂಬೈನಿಂದ‌ ಬೆಂಗಳೂರಿಗೆ ತಲುಪುತ್ತಿದ್ದಂತೆ ವ್ಯಕ್ತಿ ಓರ್ವ ಕ್ಯಾತೆ ತೆಗೆದಿದ್ದಾನೆ. ತಾನು ಬಿಎಂಟಿಸಿ ಬಸ್ಸು ಪ್ರಯಾಣಕ್ಕೆ 100 ರೂ. ನೀಡುವುದಿಲ್ಲ. ಅಲ್ಲದೇ ತನ್ನ ಬಳಿ ಹಣವಿಲ್ಲದಿರುವುದರಿಂದ ಹಣ ನೀಡಲು‌ ಸಾಧ್ಯವಿಲ್ಲ. ಬೇಕಿದ್ದರೆ ತನ್ನನ್ನು ಮತ್ತೆ ವಾಪಸ್ಸು ಮುಂಬೈಗೆ ಕಳುಹಿಸಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಅಲ್ಲದೇ, ಎಲ್ಲವೂ ಉಚಿತ ಇದೆ ಎಂದಿದ್ದಕ್ಕೆ ನಾವು ಬಂದಿದ್ದೇವೆ. ಈಗ ಹಣ ಕೇಳಿದರೆ ಹೇಗೆ? ಕಳೆದ 3 ತಿಂಗಳಿನಿಂದ‌ ಮುಂಬೈ ನಲ್ಲಿ ಹೇಗೆ ಜೀವನ ಸಾಗಿಸಿದ್ದೇವೆ ಎಂಬುದು ನಮಗೆ ಗೊತ್ತು. ನಾವು ಯಾವುದೇ ಕಾರಣಕ್ಕೂ ಹಣ ನೀಡಲ್ಲ ಎಂದು ಪ್ರಯಾಣಿಸುವ ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com