ಮಳೆಗಾಲ ಆರಂಭ: ಶರಾವತಿ ವಿದ್ಯುತ್ ಯೋಜನೆ ಕಾಮಗಾರಿ ಸ್ಥಗಿತ

ಜೀವ ವೈವಿಧ್ಯತೆಯ ಆಗರ ಶರಾವತಿ ಕಣಿವೆಯಲ್ಲಿ ವಿವಾದಾತ್ಮಕ 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ 'ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆ'ಗಾಗಿ ಕೈಗೊಳ್ಳಲಾಗಿದ್ದ ಭೂ ಗರ್ಭ ಅಧ್ಯಯನವನ್ನು ರಾಜ್ಯ ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ.
ಸರ್ವೆ ಕಾರ್ಯಕ್ಕಾಗಿ ಬಳಸಲಾಗುತ್ತಿದ್ದ ಉಪಕರಣಗಳು
ಸರ್ವೆ ಕಾರ್ಯಕ್ಕಾಗಿ ಬಳಸಲಾಗುತ್ತಿದ್ದ ಉಪಕರಣಗಳು
Updated on

ಬೆಂಗಳೂರು: ಜೀವ ವೈವಿಧ್ಯತೆಯ ಆಗರ ಶರಾವತಿ ಕಣಿವೆಯಲ್ಲಿ ವಿವಾದಾತ್ಮಕ 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ 'ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆ'ಗಾಗಿ ಕೈಗೊಳ್ಳಲಾಗಿದ್ದ ಭೂಗರ್ಭ ಅಧ್ಯಯನವನ್ನು ರಾಜ್ಯ ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಪರಿಸರವಾದಿಗಳ ವಿರೋಧದ ನಡುವೆ ವಾರದ ಹಿಂದಷ್ಟೇ ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಸರ್ವೆಯನ್ನು  ಕೈಗೊಳ್ಳಲಾಗಿತ್ತು. 

ಈ ಯೋಜನೆಯಿಂದಾಗಿ  ಅಳಿವಿನಂಚಿನಲ್ಲಿರುವ ಸಿಂಗಳೀಕ, ಕಾಡೆಮ್ಮೆ ರೀತಿಯ ಅಪರೂಪದ ಜೀವ ರಾಶಿಗಳು ನಾಶವಾಗಲಿವೆ ಎಂದು ವನ್ಯಜೀವಿ ಮತ್ತು ಇಂಧನ ವಲಯದ ತಜ್ಞರು ಕೂಡಾ ಈ ಅಧ್ಯಯನವನ್ನು ಆಕ್ಷೇಪಿಸಿದ್ದರು. 

ಅಭಯಾರಣ್ಯದಲ್ಲಿ ಜಿಯೋ ಟೆಕ್ನಿಕಲ್ ಸೇರ್ವೆ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ಭೂಮಿ ಕೊರೆಯುವುದನ್ನು ಒಂದು ದಿನ ಮಾತ್ರ ಮಾಡಲಾಯಿತು. ಮಳೆಗಾಲದಲ್ಲಿ ಯಾವುದೇ ಕೆಲಸಗಳನ್ನು ಮಾಡಬಾರದೆಂಬುದು ಷರತ್ತುಗಳಲ್ಲಿ ಒಂದಾಗಿದ್ದು, ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅರಣ್ಯ ಉಪಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

ರಾಷ್ಟ್ರೀಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಹಾಗೂ ವನ್ಯಜೀವಿ ತಜ್ಞ ಪ್ರವೀಣ್ ಭಾರ್ಗವ್ ಸೇರಿದಂತೆ ಹಲವು ತಜ್ಞರು ಸರ್ವೇ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಅವರು ಹೇಳಿದ್ದಾರೆ. ಕಾರ್ಯಸಾಧ್ಯತೆಯ ಸರ್ವೆಯನ್ನು ಮಾತ್ರ ಸ್ಥಾಯಿ ಸಮಿತಿ ಅನುಮೋದಿಸಿರುವುದಾಗಿ ಎನ್ ಬಿಡಬ್ಲ್ಯೂ ಸ್ಥಾಯಿ ಸಮಿತಿ ಸದಸ್ಯ ಸುಕುಮಾರ್ ರಾಮನ್ ತಿಳಿಸಿದ್ದಾರೆ. 

ಪ್ರಸ್ತಾವಿತ ವಿದ್ಯುತ್ ಯೋಜನೆ ಅನುಮೋದನೆ ಪಡೆದುಕೊಂಡಿಲ್ಲ, ಸಚಿವಾಲಯಕ್ಕೆ ಸಂಪೂರ್ಣ ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ರಾಷ್ಟ್ರೀಯ ವನ್ಯಜೀವಿ ಮಂಡಳಿ ಪರಿಶೀಲನೆ ನಡೆಸಲಿದೆ. ಭೂಮಿ ಕೊರೆಯುವುದು ಸೇರಿದಂತೆ ಇನ್ನೂ ಅನೇಕ ಕೆಲಸಗಳನ್ನು ಅದು ವಿಚಾರಣೆ ನಡೆಸಲಿದೆ.  ಅಭಯಾರಣ್ಯದಲ್ಲಿ ಅರಣ್ಯಯೇತರ ಚಟುವಟಿಕೆಗಳನ್ನು ನಡೆಸದಂತೆ ವನ್ಯಜೀವಿ ವಿಭಾಗೀಯದಿಂದ 2012ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿದ್ಯುತ್ ನೀತಿ ವಿಶ್ಲೇಷಕ ಶಂಕರ್ ಶರ್ಮಾ ಹೇಳಿದ್ದಾರೆ. 

ಒಂದು ವೇಳೆ ಯಾವುದೇ ರೀತಿಯ ಅರಣ್ಯಯೇತರ ಚಟುವಟಿಕೆಗಳಿಗಾಗಿ ಸ್ಥಾಯಿ ಸಮಿತಿ ಶಿಫಾರಸ್ಸಿನ ನಂತರ ಸಂಬಂಧಪಟ್ಟ ಏಜೆನ್ಸಿಗಳು ಸುಪ್ರೀಂಕೋರ್ಟ್ ನಲ್ಲಿ ಅಂತಿಮ ಸಮ್ಮತಿ ಪಡೆಯಬೇಕಾಗುತ್ತದೆ.ಮಳೆಗಾಲದ ಹಿನ್ನೆಲೆಯಲ್ಲಿ ಅಪರೂಪದ ವನ್ಯಜೀವಿಗಳ ಸಂತತಿಗೆ ಹಾನಿಯಾಗದಂತೆ ಕಾಮಗಾರಿ ಸ್ಥಗಿತಗೊಳಿಸುವಂತೆ ಹಾಗೂ ಸಲಕರಣೆಗಳನ್ನು ಅಭಯಾರಣ್ಯದಿಂದ ಹೊರಗಡೆ ಇಡುವಂತೆ ಮನವಿ ಮಾಡಲಾಗಿದೆ ಎಂದು ಶಂಕರ್ ಶರ್ಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com