ಕೊರೋನಾ ಭೀತಿ ನಡುವೆಯೂ ಸಾಮಾಜಿಕ ಅಂತರ ಮರೆತ ಬಾಗಲಕೋಟೆ ಜಿಲ್ಲೆ ಸಿಇಒ; ನರೇಗಾ ಕೆಲಸಗಾರರ ಜಾತ್ರೆ

ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೇ ಕಡೆ ಗುಂಪಾಗಿ ಸೇರಿರುವ ಮೇಲಿನ ಪೋಟೊ ನೋಡಿ ಗಾಬರಿ ಆಗಬೇಡಿ. ಅವರೆಲ್ಲ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಂದವರು.
ಕೂಲಿಕಾರರೊಂದಿಗೆ ಅಂತರ ಮರೆತು ಸಮಾಲೋಚಿಸುತ್ತಿರುವ ಸಿಇಒ
ಕೂಲಿಕಾರರೊಂದಿಗೆ ಅಂತರ ಮರೆತು ಸಮಾಲೋಚಿಸುತ್ತಿರುವ ಸಿಇಒ
Updated on

ಬಾಗಲಕೋಟೆ: ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೇ ಕಡೆ ಗುಂಪಾಗಿ ಸೇರಿರುವ ಮೇಲಿನ ಪೋಟೊ ನೋಡಿ ಗಾಬರಿ ಆಗಬೇಡಿ. ಅವರೆಲ್ಲ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಂದವರು.

ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಸನ್ನಿವೇಶದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಬರುವ ನೂರಾರು ಜನ ಕೂಲಿಕಾರರು ಒಂದೆ ಕಡೆಗೆ ಕೆಲಸ ಮಾಡುತ್ತಿದ್ದು, ಇವರಲ್ಲಿ ಬಹುತೇಕರು ಮಾಸ್ಕ್ ಧರಿಸಿಯೇ ಇಲ್ಲ. ಸಾಮಾಜಿಕ ಅಂತರ ಕಾಪಾಡುವುದಂತೂ ದೂರಿನ ಮಾತು ಎನ್ನುವುದನ್ನು ಪೊಟೋ ಸಾರಿ ಸಾರಿ ಹೇಳುತ್ತಿದೆ. ಬರೋಬ್ಬರಿ ೪೬೦ ಜನ ಕೂಲಿಕಾರರ ಜತೆ ನಿಂತು ಪೋಟೊ ಕ್ಲಿಕ್ಕಿಸಿಕೊಂಡವರು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ. ಭಾನುವಾರ ಕೆನಾಲ ಬಳಿ ಕೆಲಸ ಹೇಗೆ ನಡೆಯುತ್ತಿದೆ ಎನ್ನುವ ಪರಿಶೀಲನೆಗೆ ಹೋದಾಗ ಈ ಸನ್ನಿವೇಶ ನಿರ್ಮಾಣವಾಗಿತ್ತು.

ಕೊರೋನಾ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ಸಿಇಒ ಕಚೇರಿ ಕಡೆಗೆ ಕಾಲೂ ಹಾಕದೆ ನಿತ್ಯ ಜಿಲ್ಲೆಯ ಗ್ರಾಮ ಗ್ರಾಮಗಳನ್ನು ತಿರುಗಿ ಕೊರೋನಾ ವಾರಿರ‍್ಸ್ಗಳನ್ನು ಕಟ್ಟಿಕೊಂಡು ಮನೆ ಮನೆಗೆ ಹೋಗಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಮನೆ ಬಿಟ್ಟು ಹೊರ ಬರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜನ ಜಾಗೃತಿ ಮೂಡಿಸುವ ಕೆಲಸದಲ್ಲಿ ತನ್ನನ್ನು ತೋಡಗಿಸಿಕೊಂಡಿದ್ದವರು. ಜಿಲ್ಲಾದ್ಯಂತ ಲಕ್ಷಾಂತರ ಮಾಸ್ಕ್ಗಳನ್ನು ವಿತರಿಸಿದವರು. ಜಿಪ. ಸಿಇಒ ಅಂತಹವರು ಭಾನುವಾರ ನರೇಗಾ ಯೋಜನೆಯಡಿ ಕೆನಾಲ್ ಹುಳೇತ್ತುವ ಕಾರ್ಯ ಹೇಗಿದೆ ಎನ್ನುವುದನ್ನು ಪರಿಶೀಲಿಸಲು ಹೋದಾಗ ಅವರ ಹಿಂದೆ ಬೃಹತ್ ಜನಸ್ತೋಮವೇ ಕಂಡು ಬಂದಿತು.

ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಮರೆತು ಸಿಇಒ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಅವರೊಟ್ಟಿಗೆ ಗುಂಪಾಗಿ ಸೇರಿ ಚರ್ಚೆ ನಡೆಸುತ್ತಿದ್ದಾರೆ. ಈ ಸನ್ನಿವೇಶ ಗಮನಿಸಿದ ಯಾರಿಗೆ ಆಗಲಿ ಜಿಲ್ಲೆಯಲ್ಲಿ ಇವರೆಂಥ ಜಾಗೃತಿ ಮೂಡಿಸಿದ್ದಾರೆ ಎನ್ನುವ ಅನುಮಾನ ಕಾಡದೇ ಇರದು. ಕಳೆದ ಎರಡು ತಿಂಗಳಿಗೂ ಅಧಿಕ ಕಾಲ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜನಜಾಗೃತಿ ಕೆಲಸ ಮಾಡಿದವರೇ ಈಗ ತಾವೂ ನಿಯಮ ಉಲ್ಲಂಘಿಸಿ, ಇತರರು ನಿಯಮ ಪಾಲನೆ ಮಾಡದೇ ಇರುವುದನ್ನು ಕಂಡು ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ನರೇಗಾ ಯೋಜನೆಯಡಿ ಕೆಲಸಕ್ಕೆ ಬರುತ್ತಿರುವ ಕೂಲಿಕಾರರಲ್ಲಿ ಹೊರ ರಾಜ್ಯಗಳಿಂದ ಬಂದವರು ಇದ್ದಾರೆ. ಅವರೆಲ್ಲ ಕ್ವಾರಂಟೈನ್ ಆಗಿ ಬಂದವರಿದ್ದರೂ ಜಾಗೃತಿ ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗುತ್ತಿರುವಾಗಿ ಅದರ ವಿರುದ್ದ ಜನಜಾಗೃತಿ ಮಾಡಿದವರೇ ಅದನ್ನೆಲ್ಲ ಮರೆತು ಕೆಲಸದ ಜಾಗೆಯಲ್ಲಿ ಸಾಮಾಜಿಕ ಅಂತರ ಕಾಪಾಡದೇ ಸಮಾವೇಶದ ರೂಪದಲ್ಲಿ ಸೇರಿದರೆ ಹೇಗೆ ಎನ್ನುವುದು ಜಿಲ್ಲೆಯ ಜನತೆಯನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದ್ದು, ಆತಂಕ ಸೃಷ್ಟಿಗೂ ಕಾರಣವಾಗಿದೆ. ಕಳೆದ ಎರಡುವರೆ ತಿಂಗಳಲ್ಲಿ ಸಿಇಒ ಜಿಲ್ಲಾದ್ಯಂತ ತಿರುಗಾಡಿ ಮಾಡಿದ ಜಾಗೃತಿ ಕಾರ್ಯಕ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ.

-ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com