ಬೆಂಗಳೂರು: ಓಲಾ ಕಂಪನಿಗೆ ವಂಚಿಸುತ್ತಿದ್ದ ನಾಲ್ವರು ಸಿಸಿಬಿ ವಶಕ್ಕೆ

ಓಲಾ ಕಂಪನಿಗೆ ಲಕ್ಷಾಂತರ ರೂ. ವಂಚಿಸಿದ್ದ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.
ಓಲಾ ಕ್ಯಾಬ್‌
ಓಲಾ ಕ್ಯಾಬ್‌
Updated on: 

ಬೆಂಗಳೂರು: ಓಲಾ ಕಂಪನಿಗೆ ಲಕ್ಷಾಂತರ ರೂ. ವಂಚಿಸಿದ್ದ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.

ಭರತ್ ನಗರದ ನಾಗೇಶ್ (36), ಹೊಸಕೆರೆಹಳ್ಳಿ ರವಿ(21) ಬಸಾಪುರದ ಮನು(27), ಕೆಂಪೇಗೌಡ ನಗರದ ಸತೀಶ(32) ಬಂಧಿತ ಆರೋಪಿಗಳು.

ಗ್ರಾಹಕರ ಸೋಗಿನಲ್ಲಿ ಕಾರುಗಳನ್ನು ತಾವೇ ಮುಂಗಡ ಕಾಯ್ದಿರಿಸಿ, ಎಲ್ಲಿಯೂ ಸಂಚರಿಸದೇ ದಿನಕ್ಕೆ 15ರಿಂದ 20 ಟ್ರಿಪ್ ಮಾಡಿದ್ದೇವೆ ಎಂದು ಹೇಳಿ ಪ್ರೋತ್ಸಾಹಧನ ಪಡೆದು ವಂಚಿಸುತ್ತಿದ್ದರು.

ಬಂಧಿತ ಆರೋಪಿಗಳಿಂದ 23 ಲಕ್ಷ ರೂ. ಮೌಲ್ಯದ ಎರಡು ಇನ್ನೊವಾ ಕಾರು, ಒಂದು ಸ್ವಿಫ್ಟ್ ಕಾರು, 500 ಸಿಮ್ ಕಾರ್ಡ್, ಐಡಿ ಕಾರ್ಡ್ ಮುದ್ರಿಸುವ ಎರಡು ಪ್ರಿಂಟರ್, 16 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡು ಆರೋಪಿಗಳು ತಮ್ಮ ಕಾರುಗಳನ್ನು ಓಲಾ ಕಂಪನಿಗೆ ಸೇರಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಬಳಿಕ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ತಮ್ಮ ಬಳಿಯಿದ್ದ 50 ಬುಕ್ಕಿಂಗ್ ಐಡಿಗಳು ಇರುವುದಾಗಿ ನಂಬಿಸಿ, ಕಂಪನಿಯಿಂದ ತಮ್ಮ ಕಾರುಗಳಿಗೆ ಟ್ರಿಪ್ ಒದಗಿಸಲು ಅನುಮತಿ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಕ್ಯಾಬ್ ಗಳು ದಿನಕ್ಕೆ 15ರಿಂದ 20 ಟ್ರಿಪ್ ಮಾಡಿದರೆ ಸ್ಲ್ಯಾಬ್ ಗೆ ತಕ್ಕಂತೆ ಸಾಕಷ್ಟು ಪ್ರೋತ್ಸಾಹ ಧನವನ್ನು ಕಂಪನಿಗಳು ನೀಡುತ್ತವೆ.

ಆರೋಪಿ ಚಾಲಕರು ಬೇರೆ, ಬೇರೆ ಮೊಬೈಲ್ ಫೋನ್ ಗಳ ಮೂಲಕ ಗ್ರಾಹಕರಂತೆ ತಾವೇ ಕ್ಯಾಬ್ ಗಳನ್ನು ಬುಕ್ ಮಾಡಿದ್ದಾರೆ. ಆದರೆ, ಆ ಟ್ರಿಪ್ ನಲ್ಲಿ ಕಾರು ನಿಂತ ಸ್ಥಳದಿಂದ ಕದಲಿರುವುದಿಲ್ಲ. ಅಲ್ಲದೇ, ಎಂಜಿನ್ ಕೂಡಾ ಸ್ಟಾರ್ಟ್ ಮಾಡದೆ, ಆರೋಪಿಗಳು ತಂತ್ರಜ್ಞಾನದ ಮೂಲಕ ಕಂಪನಿಯನ್ನು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಗೂಗಲ್ ನಲ್ಲಿ ಸಿಗುವ ‘ಜಿಪಿಎಸ್ ಮ್ಯಾಪ್ ಆ್ಯಪ್’ ಅನ್ನು ಬಳಸಿ ಮ್ಯಾಪ್ ಲೊಕೇಷನ್ ಗಳನ್ನು (ಫೇಕ್ ಜಿಪಿಎಸ್ ಪಾಥ್) ತೋರಿಸಿಕೊಂಡು ಕಾರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಿದೆ ಎಂದು ಕಿಲೋ ಮೀಟರ್ ಜಂಪ್ ಮಾಡಿ ದಿನಕ್ಕೆ 15ರಿಂದ 20 ಟ್ರಿಪ್ ಗಳನ್ನು ಬುಕ್ ಮಾಡಿ ಆರೋಪಿಗಳು ಕಂಪನಿಯಿಂದ ಪ್ರೋತ್ಸಾಹ ಧನ ಪಡೆದಿರುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com