
ಬೆಂಗಳೂರು: 5ನೇ ತರಗತಿವರೆಗೂ ಆನ್'ಲೈನ್ ತರಗತಿ ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಆನ್'ಲೈನ್ ತರಗತಿ ರದ್ದುಗೊಳಿಸುವ ಕುರಿತು ಈಗಾಗಲೇ ರಾಜ್ಯದಲ್ಲಿ ಪರ ಹಾಗೂ ವಿರೋಧದ ಮಾತುಗಳು ನಡೆಯುತ್ತಿದ್ದು, ಸಾಕಷ್ಟು ಚರ್ಚೆಗಳೂ ಕೂಡ ಆರಂಭವಾಗಿವೆ. ಹಲವು ಖಾಸಗಿ ಶಾಲೆಗಳು ಈಗಾಗಲೇ ಪ್ರಾಥಮಿಕ ತರಗತಿಗಳಿಗೆ ಆನ್'ಲೈನ್ ತರಗತಿ ಆರಂಭಿಸಿವೆ. ಈಗಾಗಲೇ ಹಲವು ಪೋಷಕರು ಲ್ಯಾಪ್'ಟಾಪ್, ಆ್ಯಂಡ್ರಾಯ್ಡ್ ಮೊಬೈಲ್ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಸರ್ಕಾರ ಇದೀಗ ಆನ್'ಲೈನ್ ತರಗತಿ ನಿಷೇಧ ಮಾಡಿರುವುದು ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುವುದಿಲ್ಲವೇ ಎಂದು ಕೆಲ ಪೋಷಕರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಆನ್'ಲೈನ್ ತರಗತಿ ನೀಡುವ ಕುರಿತು ನಿಮ್ಹಾನ್ಸ್ ಕೂಡ ವಿರೋಧ ವ್ಯಕ್ತಪಡಿಸಿದೆ.
ಈ ನಡುವೆ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಚಿವ ಸುರೇಶ್ ಕುಮಾರ್ ಅವರು, ಈ ಕುರಿತ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪಿಯು ಮತ್ತು ಎಸ್ಎಸ್ಎಲ್'ಸಿ ಪರೀಕ್ಷೆ ನಡೆಸಲು ಕ್ರಮಗಳನ್ನು ಕೈಗೊಂಡಿದ್ದೀರಿ. ಇದೇ ರೀತಿ ತರಗತಿಗಳನ್ನು ನಡೆಸಲು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೇ?
ರೆಗ್ಯುಲರ್ ಕ್ಲಾಸ್ ನಡೆಸಲು ಇದು ಸಕಾಲವಲ್ಲ. ಇದಕ್ಕೆ ಪರ್ಯಾಯ ಮಾರ್ಗವೂ ಇಲ್ಲ. ಪ್ರಸ್ತುತ ಕೊರೋನಾ ಸೋಂಕು ತಗುಲದಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಭವಿಷ್ಯದಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ನ್ಯಾಯಯುತ ಮತ್ತು ಪರಿಣಾಮಕಾರಿ ಶಿಕ್ಷಣ ನೀಡುವ ನಿರ್ಧಾರನಗಳನ್ನು ಕೈಗೊಳ್ಳಲಾಗುತ್ತದೆ. ಈ ಕುರಿತು ಹಲವು ರೀತಿಯ ಚರ್ಚೆಗಳು, ಮಾತುಕತೆಗಳು ನಡೆಯುತ್ತಿವೆ. ಎಲ್ಲಾ ಪೋಷಕರ ಜೊತೆಗೆ ಮಾತನಾಡಿ, ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ,
ವಿದ್ಯಾರ್ಥಿಗಳಿಗೆ ರೆಗ್ಯುಲರ್ ಕ್ಲಾಸ್ ನಡೆಸುವ ಕುರಿತು ದೂರದರ್ಶನದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನಗಳು ಏನಾಯಿತು?
ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳಿಗೆ 1 ತಿಂಗಳ ಕಾಲ ಚಂದನ ವಾಹಿನಿಯಲ್ಲಿ ರಿವಿಷನ್ ಕ್ಲಾಸ್ ನಡೆಸಲಾಗಿತ್ತು. ಈ ಪ್ರಯತ್ನ ಯಶಸ್ವಿಯಾಗಿದೆ. ದೂರದರ್ಶನ ವಾಹಿನಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮುಂದುವರೆಸುವ ಕುರಿತು ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಈಗಾಗಲೇ ತಮ್ಮ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಆಯ್ದ ಜಿಲ್ಲೆಗಳಲ್ಲಿ ಆರ್ಟ್ ಸ್ಟುಡಿಯೋ ಸ್ಥಾಪಿಸುವ ಕಾರ್ಯಗಳು ನಡೆಯುತ್ತಿವೆ.
ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿದ್ದರು, ರಾಜ್ಯದ ಹಲವು ಖಾಸಗಿ ಶಾಲೆಗಳು ಆನ್'ಲೈನ್ ತರಗತಿಗಳನ್ನು ಮುಂದುವರೆಸುತ್ತಿವೆ?
ಈ ಚಟುವಟಿಕೆಗಳು ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿವೆ. ಇಂತಹ ಬೆಳವಣಿಗೆಗಳ ಮೇಲೆ ಕಣ್ಣಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಕಾಳಜಿಯನ್ನು ಖಾಸಗಿ ಶಾಲೆಗಳು ಅರ್ಥ ಮಾಡಿಕೊಳ್ಳಬೇಕು. ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ಆನ್'ಲೈನ್ ತರಗತಿ ನಿಲ್ಲಿಸದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳು ಮನೆಯಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆಂದು ಹೇಳುತ್ತಾರೆ. ಇನ್ನು ಕೆಲವರು ರದ್ದು ಮಾಡುವಂತೆ ತಿಳಿಸುತ್ತಿದ್ದಾರೆ. ಈ ಕುರಿತು ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ನಿರ್ಧಾರದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಪೋಷಕರು, ಶಾಲೆಗಳು ಮತ್ತು ತಜ್ಞರೊಂದಿಗೆ ಸಾಕಷ್ಟು ಮಾತುಕತೆ ನಡೆಸಿದ್ದೀರಾ?
ಎಲ್ಲಾ ವಿಭಾಗದ ಜನರೊಂದಿಗು ಮಾತುಕತೆ ನಡೆಸಲಾಗಿದೆ. ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ. ನೀತಿ ರೂಪದಲ್ಲಿ ಜನರ ಧ್ವನಿಯನ್ನು ಪ್ರತಿನಿಧಿಸಲಾಗುತ್ತದೆ. ಸಾಂಕ್ರಾಮಿಕ ರೋಗ ಇರುವ ಹಿನ್ನೆಲೆಯಲ್ಲಿ ಮನೆಗಳಿಂದಲೇ ಶಾಲೆಗಳನ್ನು ಮುಂದುವರೆಸುವಂತೆ ಕೆಲ ಪೋಷಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಇರುವ ಪರಿಸ್ಥಿತಿಯು ನಾವು ಹಿಂದೆಂದೂ ಚಿಂತನೆ ಮಾಡದಂತೆಹ ವಿಚಾರಗಳ ಬಗ್ಗೆ ಚಿಂತೆ ಮಾಡುವಂತೆ ಮಾಡಿದೆ.
ತಮಿಳುನಾಡು ಹಾಗೂ ತೆಲಂಗಾಣ ಸರ್ಕಾರಗಳು ಎಸ್ಎಸ್ಎಲ್'ಸಿ ಪರೀಕ್ಷೆ ರದ್ದುಪಡಿಸಿದಾಗ ಕರ್ನಾಟಕದಲ್ಲೂ ಅದೇ ರೀತಿಯಾಗುತ್ತದೆ ಎಂದುಕೊಂಡಿದ್ದೆವು...
ಕರ್ನಾಟಕಕ್ಕಿಂತಲೂ ಈ ಎರಡು ರಾಜ್ಯಗಳ ಪರಿಸ್ಥಿತಿ ಬಿನ್ನವಾಗಿದೆ. ಪರೀಕ್ಷೆ ಪರವಾಗಿ ನ್ಯಾಯಾಲಯ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಹಿತಕ್ಕಾಗಿ ನಾವು ಎಲ್ಲಾ ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
Advertisement