ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ: ಓರ್ವ ಬಂಧನ, 8 ಜನರ ವಿರುದ್ಧ ಪ್ರಕರಣ ದಾಖಲು

ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದ ಶಂಕಿತರ ಗಂಟಲು ದ್ರವ ತೆಗೆದುಕೊಲ್ಳಲು ಮುಂದಾಗಿದ್ದ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದ ಶಂಕಿತರ ಗಂಟಲು ದ್ರವ ತೆಗೆದುಕೊಲ್ಳಲು ಮುಂದಾಗಿದ್ದ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

ಬೆಳಗಾವಿ ತಾಲೂಕಿನ ಮರಣಹೊಳ ಗ್ರಾಮದ ಲಕ್ಷ್ಮಣ ಭರಮಾ ಪಾಟೀಲ ಬಂಧಿತ ವ್ಯಕ್ತಿ. ಸಾಂಸ್ಥಿಕ ಕ್ವಾರಂಟಾನ್ ನಲ್ಲಿರುವ 4 ಹಾಗೂ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಮೂವರು ವಿರುದ್ಧ ಪ್ರಕಱಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹೊಸ ವಂಟಮೂರಿ ಗ್ರಾಮ ಪಂಚಾಯಿತಿ ಪಿಡಿಒ ಪ್ರಶಾಂತ ಮುನವಳ್ಳಿ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ ನೇಸರಗಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಲ್ಲೆಗೊಳಗಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪಿಡಿಒ ಪ್ರಶಾಂತ ಮುನವಳ್ಳಿ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು 8 ಜನರ ವಿರುದ್ಧ ಪ್ರಕರಣ ದಾಖಲಿಸಿ, ಈಗಾಗಲೇ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಗ್ರಾಮಪಂಚಾಯತಿ ವ್ಯಾಪ್ತಿಯ ಮರಣಹೋಳ ಗ್ರಾಮಕ್ಕೆ ಮೇ.15, 16ರಂದು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ 24ಕ್ಕೂ ಹೆಚ್ಚು ಜನರನ್ನು ಕೊರೋನಾ ವೈರಸ್ ಸೋಂಕಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ಜನರನ್ನು ಅಧಿಕಾರಿಗಳು ಮುಂಜಾಗ್ರತೆ ಕ್ರಮವಾಗಿ ಕ್ವಾರಂಟೈನ್ ಮಾಡಿದ್ದರು. 

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ 24 ಜನರ ಗಂಟಲು ದ್ರವ ಪರೀಕ್ಷೆ ಮಾಡಿಸಲು ಶುಕ್ರವಾರ ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ವೈದ್ಯಕೀಯ ಸಿಬ್ಬಂದಿ ಹೋಗಿರುವ ಸಂದರ್ಭದಲ್ಲಿ ಕ್ವಾರಂಟೈನ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದಾಗ ಕ್ವಾರಂಟೈನ್ ನಲ್ಲಿದ್ದ ಮಹಿಳೆಯರು ಮತ್ತು ಪುರುಷರು ಸೇರಿಕೊಂಡು ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com