'ಪ್ರವಾಹ'ಕ್ಕೆ ಸರ್ಕಾರದ ಸಿದ್ಧತೆ: ಗ್ರಾಮ ಪಂಚಾಯತ್ ಗಳಲ್ಲಿ ಪ್ರವಾಹ ನಿರ್ವಹಣೆಗೆ ಪ್ರಾಯೋಗಿಕ ಯೋಜನೆ
ಹುಬ್ಬಳ್ಳಿ: ಮುಂಗಾರು ಸಮಯದಲ್ಲಿ ಪ್ರವಾಹದಂತಹ ಪರಿಸ್ಥಿತಿಯುಂಟಾದರೆ ಅವುಗಳನ್ನು ನಿಭಾಯಿಸಲು ಗ್ರಾಮ ಪಂಚಾಯತ್ ಗಳಿಗೆ ಪ್ರವಾಹ ನಿರ್ವಹಣೆ ಯೋಜನೆ ಸಿದ್ದಪಡಿಸುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.
ಈ ನಿಟ್ಟಿನಲ್ಲಿ ಪ್ರಾಯೋಗಿಕ ಯೋಜನೆಯನ್ನು ಬೆಳಗಾವಿ ಜಿಲ್ಲೆಯ ಅಥಣಿ ಗ್ರಾಮದಲ್ಲಿ ನಡೆಸಲಾಯಿತು. ಮುಂದಿನ ವಾರಗಳಲ್ಲಿ ವಿಜಯಪುರ, ಕೊಪ್ಪಳ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳ ಗ್ರಾಮ ಪಂಚಾಯತ್ ಗಳಲ್ಲಿ ಸಹ ನಡೆಸಲಾಗುತ್ತದೆ.
ರಾಜ್ಯದಲ್ಲಿ ಆಗಸ್ಟ್ ವೇಳೆಗೆ ಪ್ರವಾಹದಂತಹ ಪರಿಸ್ಥಿತಿ ತಲೆದೋರುವ ಸಾಧ್ಯತೆಯಿದ್ದು ಕೊರೋನಾ ಮತ್ತು ಪ್ರವಾಹ ಪರಿಸ್ಥಿತಿ ಎರಡನ್ನೂ ನಿಭಾಯಿಸಲು ರಾಜ್ಯ ಸರ್ಕಾರ ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಕೊರೋನಾ ವೈರಸ್ ನಿಂದಾಗಿ ಅನೇಕ ಕಟ್ಟಡಗಳು ಮತ್ತು ಸಮುದಾಯ ಕೇಂದ್ರಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮತ್ತು ಕೆಲವನ್ನು ಜ್ವರದ ತಪಾಸಣೆ ಕೇಂದ್ರಗಳನ್ನಾಗಿ ಮಾಡಿಕೊಳ್ಳಲಾಗಿದೆ.
ಹೀಗಾಗಿ ಪ್ರವಾಹ ಬಂದರೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವುದು ಸವಾಲಿನ ವಿಷಯವಾಗಬಹುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ತಯಾರಾಗುವಂತೆ ಸೂಚಿಸಲಾಗುವುದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಪ್ರದೇಶದಿಂದ ಎನ್ ಡಿಆರ್ ಎಫ್ ತಂಡ ಕರ್ನಾಟಕದ ವಿವಿಧ ಭಾಗಗಳಿಗೆ ಬಂದಿವೆ. ಧಾರವಾಡದಲ್ಲಿ ಕಳೆದ ವಾರ ಎನ್ ಡಿಆರ್ ಎಫ್ ತಂಡ ಅಣಕು ಕಾರ್ಯಾಚರಣೆ ನಡೆಸಿತ್ತು. ಅಂತಹದ್ದೇ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿ ಕೊಡಗು, ರಾಯಚೂರು ಮತ್ತು ಬೆಳಗಾವಿಗಳಲ್ಲಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ