20ನೇ ಕೊಲೆ ಪ್ರಕರಣದಲ್ಲೂ ಸರಣಿ ಸ್ತ್ರೀ ಹಂತಕ 'ಸೈನೈಡ್' ಮೋಹನ್ ದೋಷಿ
ಮಂಗಳೂರು: ಕಾಸರಗೋಡಿನ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲೂ ಸರಣಿ ಸ್ತ್ರೀ ಹಂತಕ, ಸೈನೆಡ್ ಮೋಹನ್ ದೋಷಿ ಎಂದು ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ತೀರ್ಪು ನೀಡಿದೆ.
ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ, ಸೈನೈಡ್ ನೀಡಿ ಕೊಲೆಗೈದಿದ್ದ ಆರೋಪದ ಮೇರೆಗೆ ಮೋಹನ್ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದವು.19 ಪ್ರಕರಣಗಳ ವಿಚಾರಣೆ ಮುಗಿದಿದ್ದು, ನಾಲ್ಕು ಪ್ರಕರಣಗಳಲ್ಲಿ ಮರಣ ದಂಡನೆ ಮತ್ತು 15 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೀಗ 20ನೇ ಪ್ರಕರಣದ ತೀರ್ಪು ಬಂದಿದ್ದು, ಜೂನ್ 24 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಸಾಧ್ಯತೆಯಿದೆ.
ಕಾಸರಗೋಡಿನ ಮಹಿಳಾ ಹಾಸ್ಟೆಲ್ ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ 25 ವರ್ಷದ ಯುವತಿಗೆ 2009ರಲ್ಲಿ ಮೋಹನ್ ಪರಿಚಯವಾಗಿತ್ತು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಅಪರಾಧಿ ಮೂರು ಬಾರಿ ಯುವತಿಯ ಮನೆಗೆ ಭೇಟಿ ನೀಡಿದ್ದ. 2009ರ ಜುಲೈ 8 ರಂದು ಸುಳ್ಯದ ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಬಂದಿದ್ದಳು. ಸುಳ್ಯದಿಂದ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಮೋಹನ್, ನಾವು ಮದುವೆ ಆಗಿದ್ದೇವೆ. ಶೀಘ್ರದಲ್ಲೇ ಬರುತ್ತೇವೆ ಎಂದು ಆಕೆಯ ಮನೆಯವರಿಗೆ ನಂಬಿಸಿದ್ದ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದರು.
ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದು ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಮೋಹನ್, 2009 ಜುಲೈ 15 ರಂದು ಸಮೀಪದ ಬಸ್ ನಿಲ್ದಾಣಕ್ಕೆ ಆಕೆಯನ್ನು ಕರೆದೊಯ್ದು ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ಮಾತ್ರೆ ನೀಡಿದ್ದ. ಶೌಚಾಲಯಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲಿಯೇ ಕುಸಿದು ಬಿದ್ದಿದ್ದಳು. ಪೊಲೀಸರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಳು. ಠಾಣೆಯಲ್ಲಿ ಅಪರಿಚಿತ ಯುವತಿಯ ಸಾವಿನ ಪ್ರಕರಣ ದಾಖಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
2009ರ ಆಕ್ಟೋಬರ್ ನಲ್ಲಿ ಮೋಹನ್ ನನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಸರಣಿ ಹತ್ಯೆಗಳ ಮಾಹಿತಿ ಹೊರಬಿದ್ದಿತ್ತು. ನಂತರ ಮೃತಳ ಸಹೋದರಿ ಪೊಲೀಸರಿಗೆ ದೂರು ನೀಡಿದ್ದರು. ಹಿಂದಿನ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಮತ್ತು ಈಗಿನ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ