ನೈಋತ್ಯ ರೈಲ್ವೇ ವಿಭಾಗದ ಅಧಿಕಾರಿಗಳಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ: ಆತಂಕದಲ್ಲಿ 500 ನೌಕರರು

ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಎರಡನೇ ಸಾವು ಸಂಭವಿಸಿದ್ದು, ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 57 ವರ್ಷದ ನೌಕರ ಸಾವಿಗೀಡಾಗಿದ್ದು, ಸಾವಿನ ನಂತರ ನಡೆಸಲಾದ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಎರಡನೇ ಸಾವು ಸಂಭವಿಸಿದ್ದು, ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 57 ವರ್ಷದ ನೌಕರ ಸಾವಿಗೀಡಾಗಿದ್ದು, ಸಾವಿನ ನಂತರ ನಡೆಸಲಾದ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢವಾಗಿದೆ. 

ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿಯಾಗಿದ್ದ ಈ ವ್ಯಕ್ತಿ ಕರ್ತವ್ಯದ ಮೇಲೆ ಮಹಾರಾಷ್ಟ್ರದ ಮಿರಜ್'ಗೆ ತೆರಳಿ ವಾಪಸ್ ಹುಬ್ಬಳ್ಳಿಗೆ ಬಂದು ಕಳೆದ ಶುಕ್ರವಾರ ಸ್ವಗ್ರಾಮ ಚಿಕ್ಕಮ್ಯಾಗೇರಿ ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ. ಮೈಕೈ ನೋವು, ಜ್ವರ ಕಾಣಿಸಿಕೊಂಡ ಬಳಿಕ ಸೋಮವಾರ ಬಾಗಲಕೋಟೆ ಆಸ್ಪತ್ರೆಗೆ ತೆರಳುವ ವೇಳೆ ಹೃದಯಾಘಾತವಾಗಿ ಸಾವಿಗೀಡಾಗಿದ್ದು ನಂತರ ಕೋವಿಡ್ ಆಸ್ಪತ್ರೆಯಲ್ಲಿನ ಮಿನಿಲ್ಯಾಬ್'ನಲ್ಲಿ ಗಂಟಲುದ್ರವ ಪರೀಕ್ಷೆ ವೇಳೆ ಕೊರೋನಾ ಪಾಸಿಟಿವ್ ದೃಢವಾಗಿದೆ. 

ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೋವಿಡ್ ನಿಯಮಾವಳಿಯಂತೆ ಅಂತ್ಯಕ್ರಿಯೆಯನ್ನು ನಡೆಸಲಾಗಿದ್ದು, ಪಾಸಿಟಿವ್ ಖಚಿತತೆಗೆ ಬೆಂಗಳೂರು ಲ್ಯಾಬ್'ಗೆ ಸ್ಯಾಂಪಲ್ ಕಳುಹಿಸಿದ್ದಾರೆ. 

ಸಾವಿಗೀಡಾದ ರೈಲ್ವೇ ನೌಕರನಲ್ಲಿ ಕಂಡು ಬಂದ ಕೊರೋನಾ ಪಾಸಿಟಿವ್ ಪ್ರಕರಣದಿಂದ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಮೃತ ಸೋಂಕಿತರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಮೃತ ರೈಲ್ವೆ ನೌಕರನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆಹಾಕುತ್ತಿರುವ ಆರೋಗ್ಯ ಇಲಾಖೆ ಚಿಕ್ಕಮ್ಯಾಗೇರಿ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com