ಎಸ್ಎಸ್ಎಲ್'ಸಿ ಗಣಿತ ಪರೀಕ್ಷೆಗೆ ಗೈರು ಹಾಜರಾದ 10,000 ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು

ಎಸ್ಎಸ್ಎಲ್'ಸಿ ಪರೀಕ್ಷೆಯ ಮೂರನೇ ವಿಷಯವಾದ ಗಣಿತ ಪರೀಕ್ಷೆ ಶನಿವಾರ ನಡೆದಿದ್ದು, ಪರೀಕ್ಷೆಗೆ ಕಲ್ಯಾಣ ಕರ್ನಾಟಕ ಭಾಗದ ಸುಮಾರು 10,000 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಎಸ್ಎಸ್ಎಲ್'ಸಿ ಪರೀಕ್ಷೆಯ ಮೂರನೇ ವಿಷಯವಾದ ಗಣಿತ ಪರೀಕ್ಷೆ ಶನಿವಾರ ನಡೆದಿದ್ದು, ಪರೀಕ್ಷೆಗೆ ಕಲ್ಯಾಣ ಕರ್ನಾಟಕ ಭಾಗದ ಸುಮಾರು 10,000 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ತಿಳಿದುಬಂದಿದೆ. 

ನಿನ್ನೆಯಷ್ಟೇ ರಾಜ್ಯದ 541 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಗುರುವಾರ ನಡೆದ ಇಂಗ್ಲೀಷ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದರೆ, ಕೊಪ್ಪಳವನ್ನು ಹೊರಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಪಿ.ಬಡಗಂಡಿ ಮಾತನಾಡಿ, ಗಣಿತ ಪರೀಕ್ಷೆಗೆ ಗೈಜಹಾಜರಾದ ವಿದ್ಯಾರ್ಥಿಗಳು ಮತ್ತೆ ಪೂರಕ ಪರೀಕ್ಷೆಯಲ್ಲಿಯೂ ಪರೀಕ್ಷೆ ಬರೆಯುವ ಅವಕಾಶವಿದೆ. ಆದರೆ, ಅಂತಹವರನ್ನು ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುತ್ತದೆ. ಕ್ವಾರಂಟೈನ್ ನಲ್ಲಿರುವವರು, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿಕೊಡಲಾಗುತ್ತಿದ್ದು, ಇಂತಹ ವಿದ್ಯಾರ್ಥಿಗಳನ್ನು ಮೊದಲ ಬಾರಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳೆಂದೇ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ವಿದ್ಯಾರ್ಥಿನಿಯೊಬ್ಬಳ ತಂದೆ ಚಂದ್ರಶೇಖರ್ ಆಜಾದ್ ಎಂಬುವವರು ಮಾತನಾಡಿ, ಈ ಬಾರಿ ಗಣಿತ ಪ್ರಶ್ನೆಪತ್ರಿಕೆ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. 

ಪರೀಕ್ಷೆಗೆ ಗೈರು ಹಾಜರಾಗಿರುವ ಭರಮಪ್ಪ ಎಂಬ ವಿದ್ಯಾರ್ಥಿ ಮಾತನಾಡಿ, ಲಾಕ್'ಡೌನ್ ಪರಿಣಾಮ ಪರೀಕ್ಷೆಗೆ ಸೂಕ್ತರೀತಿಯ ಸಿದ್ಧತೆಗಳನ್ನು ನಡೆಸಲಾಗಿರಲಿಲ್ಲ. ಹೀಗಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. 

ಶಾಂತಿ ದೇಸಾಯಿ ಎಂಬ ಶಿಕ್ಷಕರು ಮಾತನಾಡಿ, ಮಕ್ಕಳು ಕೊರೋನಾ ವೈರಸ್ ಭೀತಿ ಹಾಗೂ ಲಾಕ್'ಡೌನ್ ಪರಿಣಾಮ ಸರಿಯಾಗಿ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಎರಡು ಕಾರಣಗಳಿಂದ ಪರೀಕ್ಷೆಗೆ ಗೈರು ಹಾಜರಾಗುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ನಡುವೆ ಕಂಟೈನ್ಮೆಂಟ್ ಝೋನ್ ನಲ್ಲಿರುವ 1,150 ಮಂದಿ ವಿದ್ಯಾರ್ಥಿಗಳು ಶನಿವಾರ ಪರೀಕ್ಷೆ ಬರೆದಿದ್ದು, ಇನ್ನು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 70 ಮಂದಿ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿ ನಿಯೋಜಿಸಿ ಪರೀಕ್ಷೆ ಬರೆಸಲಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com