

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಬಜೆಟ್ ನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಹನಿ ನೀರಾವರಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಮಂಡನೆಗೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಗಳಿಗಳೊಂದಿಗೆ ಪೂರ್ವ ಬಜೆಟ್ ಸಭೆಗಳನ್ನು ನಡೆಸುತ್ತಿರುವ ಯಡಿಯೂರಪ್ಪ ಅವರು ಕೃಷಿ ಯಾಂತ್ರೀಕರಣ ಹಾಗೂ ಹನಿ ನೀರಾವರಿ, ಸಾವಯವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ಉಪಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
ಈ ಬಾರಿ ಬಜೆಟ್ ನಲ್ಲಿ ಶಾಸಕಾಂಗದ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರ ಭಾಷಣದಲ್ಲಿ ಘೋಷಣೆ ಮಾಡಿದಂತೆ ಸುಮಾರು 100 ತಾಲ್ಲೂಕುಗಳಲ್ಲಿನ ಬರ ತಡೆಗಟ್ಟಲು ಸರ್ಕಾರ ಹೊಸ ಜಲಾನಯನ ಅಭಿವೃದ್ಧಿ ಯೋಜನೆ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಭೂಮಿ, ಮಣ್ಣು, ಬೆಳೆ ಮಾದರಿ ಮತ್ತು ನೀರಿನ ಬಳಕೆಗೆ ಸಂಬಂಧಿಸಿ ಎಲ್ಲಾ ಮಾಹಿತಿಯನ್ನು ಪ್ರಸಕ್ತ ವರ್ಷ ಮಣ್ಣಿನ ಆರೋಗ್ಯ ಕಾರ್ಡ್'ಗಳಂದಿಗೆ ಜೋಡಿಸುವ ಭೂ ಸಂಪನ್ಮೂಲ ಪಟ್ಟಿಯನ್ನು ಹೊರತರುವ ಸಾಧ್ಯತೆಗಳಿವೆ ಎಂದು ಕೃಷಿ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ರೈತರಿಗೆ ಮತ್ತು ಅಧಿಕಾರಿಗಳಿಗೆ ಸಹಾಯ ಮಾಡುವ ಎಲ್ಆರ್ಐ (ಭೂ ಸಂಪನ್ಮೂಲ ಪಟ್ಟಿ) ಹೊರತರಲು ಇಲಾಖೆ ಸಿದ್ಧವಾಗಿದೆ. ಬಜೆಟ್ ನಲ್ಲಿನ ಯೋಜನಗೆಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪಡೆಯಲು ಮುಖ್ಯಮಂತ್ರಿಗಳು, ತಜ್ಞರು ಮತ್ತು ರೈತ ಮುಖಂಡರೊಂದಿಗೆ ಹಲವಾರು ಸುತ್ತಿನ ಸಮಾಲೋಚನೆ ನಡೆಸಿದ್ದಾರೆಂದು ಕೃಷಿ ಇಲಾಖೆಯ ಅಧಿಕಾರಿಘಳು ಹೇಳಿದ್ದಾರೆ.