ಮೈಸೂರಿನಲ್ಲಿ ಒಬ್ಬರಿಗೆ ಕೊರೋನಾ ವೈರಸ್ ದೃಢ, ರಾಜ್ಯದಲ್ಲಿ ಒಂದೇ ದಿನ ಐವರಿಗೆ ಪಾಸಿಟಿವ್

ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಶನಿವಾರ ಒಂದೇ ದಿನ ಐವರಿಗೆ ಕೊವಿಡ್ - 19 ಇರುವುದು ದೃಢಪಟ್ಟಿದೆ.
ತರಕಾರಿ ಮಾರುವ ವ್ಯಕ್ತಿಗೆ ಮಾಸ್ಕ್ ತೊಡಿಸುತ್ತಿರುವ ಸಚಿವ ಗೋಪಾಲಯ್ಯ
ತರಕಾರಿ ಮಾರುವ ವ್ಯಕ್ತಿಗೆ ಮಾಸ್ಕ್ ತೊಡಿಸುತ್ತಿರುವ ಸಚಿವ ಗೋಪಾಲಯ್ಯ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಶನಿವಾರ ಒಂದೇ ದಿನ ಐವರಿಗೆ ಕೊವಿಡ್ - 19 ಇರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಲ್ಲದೆ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ.

ನಿನ್ನೆ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಮೈಸೂರಿಗೆ ತೆರಳಿದ್ದ ವ್ಯಕ್ತಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ .ಕೆ. ಸುಧಾಕರ್ ಅವರು ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮತ್ತೆ ಮೂವರಲ್ಲಿ ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಒಬ್ಬ ವ್ಯಕ್ತಿಯಲ್ಲಿ ಮತ್ತು ಮೈಸೂರಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ ಎಂದು ಡಾ. ಕೆ. ಸುಧಾಕರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಮೆಕ್ಕಾ ಪ್ರವಾಸದಿಂದ ಬಂದ 32 ವರ್ಷದ ವ್ಯಕ್ತಿಯಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದರು. ಇದೀಗ ಮತ್ತೆ ಮೂವರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಸುಧಾಕರ್ ತಿಳಿಸಿದ್ದಾರೆ.

ನಿನ್ನೆಯವರೆಗೆ 15 ಜನರಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಇಂದು ಒಂದೇ ದಿನ ಐವರಲ್ಲಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಇನ್ನು ಕೊರೋನಾ ವೈರಸ್ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಕಚೇರಿಗಳು ಹಾಗೂ ಮುಖ್ಯ ಸ್ಥಳಗಳಲ್ಲಿ ಥರ್ಮಲ್ ಟೆಸ್ಟ್ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಕೋವಿಡ್-19 ರೋಗ ಪೀಡಿತರಿಗೆ, ಮನೆ ಮತ್ತು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳಿಗೆ ಮಾನಸಿಕ ಆರೋಗ್ಯ ಸಮಾಲೋಚನೆ ನಡೆಸಲಾಗುತ್ತಿದೆ. ಇದುವರೆಗೆ 4390 ಕೌನ್ಸಲಿಂಗ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com