ಕೊರೋನಾ ರೆಡ್ ಝೋನ್: ಬೆಂಗಳೂರಿನಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಸೇರಿಸಿ ಏಳು ವಲಯ: ಆರ್. ಅಶೋಕ

ಬೆಂಗಳೂರಿನಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಸೇರಿಸಿ ಏಳು ವಲಯ ಮಾಡಲಾಗುವುದು. ವಲಯವಾರು ವಿಂಗಡಣೆ ಮಾಡುವ ಬಗ್ಗೆ ಅನುಮತಿ ಕೋರಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಆರ್. ಅಶೋಕ್
ಆರ್. ಅಶೋಕ್
Updated on

ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಸೇರಿಸಿ ಏಳು ವಲಯ ಮಾಡಲಾಗುವುದು. ವಲಯವಾರು ವಿಂಗಡಣೆ ಮಾಡುವ ಬಗ್ಗೆ ಅನುಮತಿ ಕೋರಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲವಾದರೆ ಬೆಂಗಳೂರು ಒಂದು ಕಡೆ ಕೊರೋನಾ ಇದ್ದರೆ ಇಡೀ ಬೆಂಗಳೂರು ರೆಡ್ ಝೋನ್ ಎಂದು ಘೋಷಣೆ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ವಲಯವಾರು ವಿಂಗಡೆ ಮಾಡಲಾಗುವುದು. ಸಂಜೆ ಬಿಬಿಎಂಪಿ ಆಯುಕ್ತರೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಎಲ್ಲ ಭಾಗದಲ್ಲಿ ಸಬ್‌ ರಿಜಿಸ್ಟ್ರಾರ್ ಕಚೇರಿಗಳನ್ನು ಪುನಾರಂಭಿಸಲಾಗಿದೆ. ಮೈಸೂರಿನಲ್ಲಿ ಇಂದಿನಿಂದ ಕಚೇರಿಗಳು ಆರಂಭಿಸಿದ್ದೇವೆ. ಏಪ್ರಿಲ್ 30ರಂದು ಬೆಂಗಳೂರಿನಲ್ಲಿ‌ 4 ಕೋಟಿ ಮತ್ತು ಒಟ್ಟಾರೆ 7.31 ಕೋಟಿ ನೋಂದಣಿ ಹಣ ಸಂಗ್ರಹವಾಗಿದೆ. ಮೇ 2ರಂದು 3 ಕೋಟಿ ಹಣ ಹರಿದು ಬಂದಿದೆ. ಇಂದಿನಿಂದ ಹೆಚ್ಚು ಹಣ ಹರಿದು ಬರುವ ನಿರೀಕ್ಷೆ ಇದೆ’ ಎಂದರು.

ಕಾಂಗ್ರೆಸ್ ಗಿಂತ ಹೆಚ್ಚು ಬುದ್ದಿವಂತರು ಬಿಜೆಪಿಯಲ್ಲಿದ್ದಾರೆ. ಕಾಂಗ್ರೆಸ್ ನ ಬಿಟ್ಟಿ ಸಲಹೆಗಳು ಸರ್ಕಾರಕ್ಕೆ ಬೇಕಿಲ್ಲ. ಬೇಕಿದ್ದರೆ ಕಾಂಗ್ರೆಸ್ ನವರು ತಮ್ಮ ಸಲಹೆಗಳನ್ನು ವಿಶ್ವಸಂಸ್ಥೆಗೆ ನೀಡಲಿ ಎಂದು ವ್ಯಂಗ್ಯವಾಡಿದ ಅಶೋಕ, ಕೊರೋನಾದಂತಹ ವಿಚಾರದಲ್ಲಿ ಯಾವುದೇ ರಾಜಕಾರಣಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. 120 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಈ ಮಟ್ಟದ ರಾಜಕೀಯಕ್ಕೆ ಇಳಿದಿದೆ. ನಾನು ಹಣ ನೀಡುತ್ತೇನೆ ಎಂದು ಬಸ್ ನಿಲ್ದಾಣದ ತುಂಬೆಲ್ಲಾ ಡಿಕೆ ಶಿವಕುಮಾರ್ ಓಡಾಡಿದ್ದಾರೆ. ಕೊರೋನ ವಿಚಾರದಲ್ಲಿ ರಾಜ್ಯ ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಂಡಿದ್ದು, 50 ಸಾವಿರ ಜನರಿಗೆ ಕೊರೋನ ಸೋಂಕು ಕಂಡು ಬಂದರೂ ಅದನ್ನು ಎದುರಿಸಲು ಸರ್ಕಾರ ಸಮರ್ಥವಿದೆ ಎಂದು ಹೇಳಿದರು.

ಮುಖ್ಯಮಂತ್ರಿಯವರು ಎರಡು ಬಾರಿ ವಿರೋಧ ಪಕ್ಷದವರ ಜೊಗೆ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸರ್ಕಾರದ ಕೆಲಸಗಳಿಗೆ ಬೆಂಬಲ ನೀಡುವ ಮಾತುಗಳನ್ನಾಡಿ, ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ದಿನೇಶ್ ಗುಂಡುರಾವ್, ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದಾಗಿ ಕೊರೋನಾಗೆ ದೇಣಿಗೆ ನೀಡಲು ಆಗಲಿಲ್ಲ. ಈಗ ಡಿ.ಕೆ. ಶಿವಕುಮಾರ್ ಅಧ್ಯಕ್ಷರು ಆದ ನಂತರ ದೇಣಿಗೆ ನೀಡಲು ಬರುತ್ತಾರೆ. ಇದು ಹೇಗೆ ಸಾಧ್ಯವಾಯಿತು?. ನಮಗೂ ಶಾಕ್ ಹೊಡೆಯುವ ಭೀತಿಯಿಂದ ಕಾಂಗ್ರೆಸ್ ಚೆಕ್ ಮುಟ್ಟಿಲ್ಲ. ಸರ್ಕಾರ ಕೋಟಿ ಕೋಟಿ ರೂಪಾಯಿಗಳ ಖರ್ಚು ಮಾಡುತ್ತಿದೆ. ಕಾಂಗ್ರೆಸ್ ಒಂದು ಕೋಟಿ ಕೊಟ್ಟು ಕೈತೊಳೆದುಕೊಳ್ಳಲು ಹೊರಟಿದೆ. ಕೊಡುವುದಿದ್ದರೆ ಕೋಟಿ ಕೋಟಿ ರೂಪಾಯಿಗಳ ಕೊರೋನಾ ದೇಣಿಗೆ ನೀಡಲಿ. ಸರ್ಕಾರಕ್ಕೆ ದೇಣಿಗೆ ನೀಡಲು ದಾನಿಗಳಿದ್ದಾರೆ. ಈ ಸರ್ಕಾರ ಬಲವಾಗಿದೆ ಸದೃಢವಾಗಿದೆ. ಈ ಹಣ ಯಾವುದು ಎಂಬುದು ನಮಗೆ ಗೊತ್ತಿಲ್ಲ. ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟಿದ್ದಕ್ಕಿಂತ ಪಡೆದದ್ದು ಜಾಸ್ತಿ ಎಂದು ವ್ಯಂಗ್ಯವಾಡಿದರು.

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಅಶೋಕ, ಬಸ್‌ ನಿಲ್ದಾಣದಲ್ಲಿ ಸುಮಾರು ಐದು ಸಾವಿರ ಮಂದಿ ಓಡಾಡಿದ್ದಾರೆ. ಅವರ ನಡುವೆ ಕಾಂಗ್ರೆಸ್ ನಾಯಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡಿದ್ದಾರೆ. ಯಾರಿಗಾರೂ ಸೋಂಕು ಇದ್ದರೆ ಎಂಬ ಪರಿಜ್ಞಾನವೂ ಅವರಿಗೆ ಇರಲಿಲ್ಲ.‌ ಈ ವೇಳೆ ಅವರು ಬೇರೆಯವರಿಗೆ ಹೇಳುವ ನೈತಿಕತೆ ಇಲ್ಲ. ಹೀಗಾಗಿ ಅವರಿಗೂ ತಪಾಸಣೆ ಆಗಬೇಕು. ಅವರನ್ನೂ ಕ್ವಾರೆಂಟೈನ್ ಮಾಡುವ ಅವಕಾಶ ಬರಬಹುದು’ ಎಂದರು.

ಸಿನಿಮಾ, ಧಾರಾವಾಹಿ ಚಿತ್ರೀಕರಣ ಎಂದಿನಿಂದ ಆರಂಭಿಸಬಹುದು ಎಂದು ಮುಖ್ಯಮಂತ್ರಿ ಜೊತೆ ಮಂಗಳವಾರ ಚರ್ಚೆ ಮಾಡುತ್ತೇನೆ. ಆ ಬಳಿಕ ಈ ಬಗ್ಗೆ ಹೇಳುತ್ತೇನೆ. ಅವರು ಅಂತರ ಕಾಪಾಡುವ ಬಗ್ಗೆ ಮತ್ತು ಎಲ್ಲ ನಿಯಮ ಪಾಲಿಸುವ ಬಗ್ಗೆ ತಿಳಿಸಿದ್ದಾರೆ. ಕೆಲವರು ಭೇಟಿಯಾಗಿ ಈ ವಿಷಯ ಹಂಚಿಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com