800 ಕ್ಯಾಮೆರಾ ಗ್ರಿಡ್‌ಗಳೊಂದಿಗೆ ಬಂಡೀಪುರದಲ್ಲಿ ಹುಲಿ ಗಣತಿ...

ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿಯ ಕಾರ್ಯ ನಡೆಸುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಾಮರಾಜನಗರ: ಹುಲಿ ನಮ್ಮ ರಾಷ್ಟ್ರ ಪ್ರಾಣಿ. ಅದನ್ನು ಸಂರಕ್ಷಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವು ಹೌದು. ದೇಶದಲ್ಲಿಯೇ ಅತೀ ಹೆಚ್ಚು ಹುಲಿಗಳನ್ನು ಹೊಂದಿ, ದ್ವಿತೀಯ ಸ್ಥಾನವನ್ನು ಪಡೆದಕೊಂಡಿರುವ ಹೆಗ್ಗಳಿಕೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸಲ್ಲುತ್ತದೆ. ಇಲ್ಲಿ ಹುಲಿಗಳ ವಾಸಸ್ಥಾನಕ್ಕೆ ಬೇಕಾದಂತಹ ಪೂರಕವಾದ ಹವಾಗುಣ, ಪರಿಸರ, ಆಹಾರ ಲಭ್ಯವಿದೆ. 

ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿಯ ಕಾರ್ಯ ನಡೆಸುತ್ತದೆ. ಕರ್ನಾಟಕದ ಬಂಡೀಪುರ ಹುಲಿಸಂರಕ್ಷಿತ ಪ್ರದೇಶ, ನವದೆಹಲಿಯ ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರ್ಟಿ ಹಾಗೂ ಡೆಹ್ರಾಡೂನ್‌ನ ವೈಲ್‌ಡ್ ಲೈಫ್ ಇನ್‌ಸ್ಟ್ಯೂಟ್ ಆಫ್ ಇಂಡಿಯಾ ಸಹಯೋಗದಲ್ಲಿ 2014ರಲ್ಲಿ ಹುಲಿ ಗಣತಿ ನಡೆದಾಗ ದೇಶದಲ್ಲಿದ್ದ ಒಟ್ಟು 50 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2226 ಹುಲಿಗಳು ಕಂಡು ಬಂದಿದ್ದವು. 

ಆಗ ಕರ್ನಾಟಕ ರಾಜ್ಯದಲ್ಲಿರುವ 5 ಹುಲಿ ಸಂರಕ್ಷಿತ ಪ್ರದೇಶಗಳಾದ, ಭದ್ರ, ಕಾಳಿ (ದಾಂಡೇಲಿ), ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟಾರೆ 406ಕ್ಕೂ ಹೆಚ್ಚು ಹುಲಿಗಳು ಕಂಡುಬಂದಿದ್ದವು. ಇದರಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿಸಂರಕ್ಷಿತ ಪ್ರದೇಶವೊಂದೇ 139ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿದ್ದು, ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಅಂದು ಕಾಯ್ದಿರಿಸಿಕೊಂಡಿತ್ತು. ಆದರೆ ಅದೃಷ್ಟವಶಾತ್ ಮತ್ತೊಮ್ಮೆ 2018ರಲ್ಲಿ ಎನ್‌ಟಿಸಿಎ ನಿರ್ದೇಶನದ ಮೇರೆಗೆ ಹುಲಿಗಣತಿಯು ದೇಶಾದ್ಯಂತ ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ಏಕಕಾಲದಲ್ಲಿ ನಡೆದಾಗ, ಆ ಸಾಲಿನ ಪಟ್ಟಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನಮಂತ್ರಿ ನರೇಂದ್ರ ಮೋದಿರವರು 2019ರಲ್ಲಿ ಬಿಡುಗಡೆ ಮಾಡಿದಾಗ ಮದ್ಯಪ್ರದೇಶವು ಒಟ್ಟಾರೆ 428 ಹುಲಿಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಕರ್ನಾಟಕ ರಾಜ್ಯವು ಒಟ್ಟಾರೆ 426 ಹುಲಿಗಳೊಂದಿಗೆ ಎರಡನೇ ಸ್ಥಾನಕ್ಕೆ ಕೇವಲ ಎರಡು ಹುಲಿಗಳ ಅಂತರದಲ್ಲಿ ದೂಡಲ್ಪಟ್ಟಿತ್ತು. 

ಈಗ ಮತ್ತೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು 2018ರಲ್ಲಿ ಕ್ಯಾಮೆರಾ ಗ್ರಿಡ್‌ಗೆ ಬಿಟ್ಟು ಹೋಗಿರುವ ಹುಲಿಗಳನ್ನು ಮತ್ತೊಮ್ಮೆ ಸೆರೆಹಿಡಿಯುವಂತೆ 2019-20ನೇ ಸಾಲಿನಲ್ಲಿ ಹುಲಿ ಗಣತಿಯನ್ನು ನಡೆಸಬೇಕೆಂದು ರಾಷ್ಟ್ರದಲ್ಲಿರುವ ಸಂಬಂಧಪಟ್ಟ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿರುವ ಐದು ಹುಲಿ ಸಂರಕ್ಷಿತ ಪ್ರಾಧಿಕಾರದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಯಂ ಸೇವಕರನ್ನು ಈ ಬಾರಿ ಗಣತಿ ಕಾರ್ಯದಲ್ಲಿ ಕೈಬಿಟ್ಟು, ಕೇವಲ ತನ್ನ ಇಲಾಖೆಯ ಸಿಬ್ಬಂದಿಗಳು ಹಾಗೂ ಕ್ಯಾಮೆರಾ ಗ್ರಿಡ್‌ಗಳನ್ನು ಬಳಸಿ, ಹುಲಿ ಗಣತಿಯನ್ನು ಆರಂಬಿಸಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖಾಧಿಕಾರಿಗಳು ಕೂಡ ಈ ಬಾರಿ 800 ಕ್ಯಾಮೆರಾಗ್ರಿಡ್‌ಗಳನ್ನು ಹುಲಿ ಸಂಚರಿಸುವ ದಾರಿಗಳಲ್ಲಿ ಅಳವಡಿಸಿ, ತಾವೇ ಸ್ವಯಂ ಪ್ರೇರಿತವಾಗಿ ಹುಲಿ ಗಣತಿ ನಡೆಸಿ, ಅವುಗಳ ದತ್ತಾಂಶಗಳನ್ನು ಕ್ರೋಢಿಕರಿಸಿ, ಎನ್‌ಟಿಸಿಎಗೆ ರವಾನಿಸಿದ್ದಾರೆ. 

ಈ ಬಾರಿಯ ಹುಲಿ ಗಣತಿಯಲ್ಲಿ ಇಕಾಲಾಜಿಕಲ್ ಮೊಬೈಲ್ ಆ್ಯಡೊರೀಯ್‌ಡ್ ಆ್ಯಪ್‌ನ್ನು ಹೊಸದಾಗಿ ಗಣತಿ ಕಾರ್ಯದಲ್ಲಿ ಬಳಸಿಕೊಳ್ಳಲಾಗಿದ್ದು, 1020 ಚ.ಕಿ.ಮೀ ವ್ಯಾಪ್ತಿಯುಳ್ಳ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲಿ 111 ಬೀಟ್‌ಗಳನ್ನಾಗಿ ವಿಂಗಡಿಸಿ, 2019ನೇ ಡಿಸೆಂಬರ್ ಮಾಹೆಯಿಂದ 2020ನೇ ಫೆಬ್ರವರಿ ಅಂತ್ಯದವರೆಗೆ ಸುಮಾರು ಮೂರು ತಿಂಗಳುಗಳ ಕಾಲ 800 ಕ್ಯಾಮೆರಾ ಗ್ರಿಡ್‌ಗಳನ್ನು ಅಳವಡಿಸಿ ಅರಣ್ಯ ಇಲಾಖಾಧಿಕಾರಿಗಳ ಸಹಾಯ ಪಡೆದು ಹುಲಿ ಗಣತಿಯನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಹುಲಿಯ ಹೆಜ್ಜೆ ಜಾಡು ಹಿಡಿದು ಅವುಗಳ ಆವಾಸ ಸ್ಥಾನದ ವ್ಯಾಪ್ತಿ ಪತ್ತೆ ಮಾಡಲಾಗೆದೆ. ಹುಲಿ ಗಣತಿಯೊಂದಿಗೆ ಕಾಡಿನ ಇನ್ನಿತರ ಪ್ರಾಣಿಗಳಾದ ಚಿರತೆ, ಸೀಳು ನಾಯಿಗಳು, ಆನೆಗಳು, ಕಾಡೆಮ್ಮೆ, ಚಿಪ್ಪುಹಂದಿ, ಮೊಲ, ಸೇರಿದಂತೆ ಇನ್ನಿತರ ಮಾಂಸಹಾರಿ ಹಾಗೂ ಸಸ್ಯಾಹಾರಿ ಪ್ರಾಣಿಗಳನ್ನು ಗಣತಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಕಳೆದ ಗಣತಿಯಲ್ಲಿ ದಾಖಲಾಗಿದ್ದ ಅಂಕಿ ಅಂಶಕ್ಕಿಂತ ಹೆಚ್ಚಾಗಿ ಈ ವರ್ಷದ ಗಣತಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಕಾಡಿನಲ್ಲಿ ಅಳವಡಿಸಿ, ಕಳೆದ ಬಾರಿ ಕೈಬಿಟ್ಟು ಹೋಗಿರುವ ಹುಲಿಗಳನ್ನು ಈ ಬಾರಿ ಕ್ಯಾಮೆರಾ ಗ್ರಿಡ್‌ಗಳಲ್ಲಿ ಛಾಯಾಚಿತ್ರಗಳನ್ನು ಸೆರೆಹಿಡಿದು, ದತ್ತಾಂಶಗಳನ್ನು ಕೊ್ರೀಢಿಕರಿಸಿ, ಎನ್.ಟಿ.ಸಿ.ಎಗೆ ರವಾನಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಅಂದರೇ ಮೇ ಅಂತ್ಯದೊಳಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ರಾಜ್ಯಗಳು ಒಟ್ಟಾರೆ ಹೊಂದಿರುವ ಹುಲಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಆ ಪಟ್ಟಿಯಲ್ಲಿ ಈ ಬಾರಿ ಕರ್ನಾಟಕ 2014ನೇ ಸಾಲಿನಂತೆಯೇ ಮೊದಲ ಸ್ಥಾನ ಕಾಯ್ದುಕೊಳ್ಳುವುದರ ಜೊತೆಗೆ ಪುನಃ ಬಂಡೀಪುರ ದೇಶದಲ್ಲಿಯೇ ಅತೀಹೆಚ್ಚು ಹುಲಿಯನ್ನು ಹೊಂದಿರುವ ಪ್ರದೇಶವೆಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ ಈ ಬಾರಿ ಎನ್‌ಟಿಸಿಎ (ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರ್ಟಿ) ಗೈಡ್‌ಲೈನ್‌ನ ಪ್ರಕಾರ ಟ್ರಾನ್‌ಜಾಕ್‌ಟ್ ಲೈನ್ ಮಾಡಿಕೊಂಡು ಹೊಸ ತಂತ್ರಜ್ಞಾನ ಉಪಯೋಗಿಸಿಕೊಂಡು ಹುಲಿಗಣತಿಯನ್ನು ಮಾಡಲಾಗುತ್ತಿದೆ. ಹುಲಿಗಣತಿಯಲ್ಲಿ ಕಾರ್ನಿವೋರ್ ಹಾಗೂ ಮೆಗಾ ಅರ್ಬಿಯೋರ್ ಪ್ರಾಣಿಗಳನ್ನು ಗಣತಿ ಮಾಡುವುದರ ಜೊತೆಗೆ ಹುಲಿಗಳನ್ನು ಸೆರೆ ಹಿಡಿಯಲು ಕಾಡಿನಾದ್ಯಂತ 800 ಕ್ಯಾಮೆರಾ ಗ್ರಿಡ್‌ಗಳನ್ನು ಅಳವಡಿಸಲಾಗಿದೆ. ಇಗಾಗಲೇ ಕ್ಯಾಮೆರಾ ಗ್ರಿಡ್‌ಗಳು ಸೆರೆಹಿಡಿದಿರುವ ಹುಲಿಯ ಛಾಯಾಚಿತ್ರಗಳು ಸೇರಿದಂತೆ ಇನ್ನಿತರ ವನ್ಯ ಪ್ರಾಣಿಗಳ ಗಣತಿಯನ್ನು ನಮ್ಮ ಅರಣ್ಯ ಇಲಾಖಾಧಿಕಾರಿಗಳ ತಂಡ ಸರ್ವೇಮಾಡಿ ಸಂಗ್ರಹಿಸಿರುವ ದತ್ತಾಂಶಗಳನ್ನು ಕೊ್ರೀಢೀಕರಿಸಿ, ಬೆಂಗಳೂರಿನ ಅರಣ್ಯ ಭವನಕ್ಕೆ ರವಾನಿಸಿದ್ದೇವೆ. ಕಳೆದ ಬಾರಿ ನಡೆದ ಹುಲಿ ಗಣತಿಯಲ್ಲಿ ಕೇವಲ ಎರಡು ಹುಲಿಗಳ ಅಂತರದಲ್ಲಿ ಕರ್ನಾಟಕ ಎರಡನೇ ಸ್ಥಾನಕ್ಕೆ ದೂಡಲ್ಪಟ್ಟಿತ್ತು. ಆದರೆ ಈ ಬಾರಿ ಬಂಡೀಪುರದಲ್ಲಿಯೇ 150ಕ್ಕೂ ಹೆಚ್ಚು ಹುಲಿಗಳು ಕಂಡು ಬಂದಿದ್ದು, ಮೇ ಅಂತ್ಯದ ವೇಳೆಗೆ ಎನ್‌ಟಿಸಿಎ ಬಿಡುಗಡೆ ಮಾಡುವ ಪಟ್ಟಿಯಲ್ಲಿ ನಮ್ಮ ರಾಜ್ಯ ಪ್ರಥಮ ಸ್ಥಾನ ಪಡೆದುಕೊಳ್ಳುವುದರ ಜೊತೆಗೆ, ಬಂಡೀಪುರವು ಕೂಡ ದೇಶದಲ್ಲಿಯೇ ಮತ್ತೇ ತನ್ನ ಪ್ರಥಮ ಸ್ಥಾನವನ್ನು ಕಾಯ್ದುಕೊಳ್ಳಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ವರದಿ : ಗೂಳಿಪುರ ನಂದೀಶ.ಎಂ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com