ದಂಪತಿ ಕೊಲೆ: 24 ಗಂಟೆಗಳಲ್ಲೇ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು

ನಗರದಲ್ಲಿ ನಡೆದಿದ್ದ ದಂಪತಿಯ ಬರ್ಬರ ಹತ್ಯೆ ಪ್ರಕರಣವನ್ನು ಘಟನೆ ನಡೆದ 24 ಗಂಟೆಗಳಲ್ಲೇ ಭೇದಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ನಡೆದಿದ್ದ ದಂಪತಿಯ ಬರ್ಬರ ಹತ್ಯೆ ಪ್ರಕರಣವನ್ನು ಘಟನೆ ನಡೆದ 24 ಗಂಟೆಗಳಲ್ಲೇ ಭೇದಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಆವಲಹಳ್ಳಿ 2ನೇ ಮೈನ್‌ 2ನೇ ಕ್ರಾಸ್‌ ನಿವಾಸಿ ರಾಕೇಶ್ ಡಿ.ಅಲಿಯಾಸ್ ರಾಕ್ಸ್ (25 ವರ್ಷ) ಬಂಧಿತ ಆರೋಪಿ. ಗೋವಿಂದಯ್ಯ ಬಿ ಜಿ (65) ಶಾಂತಮ್ಮ (58) ದಂಪತಿಯನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಮೃತ ದಂಪತಿಯ ಪುತ್ರ ನವೀನ್ ಬಿ.ಜಿ. ಅವರು 2008ರಲ್ಲಿ  ಡಿ.ಪವಿತ್ರ ಎಂಬುವವರನ್ನು ವಿವಾಹವಾಗಿದ್ದರು. ಪತ್ನಿಯೊಂದಿಗೆ ಹೊಂದಾಣಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗಿ ನಂತರ ಕೌಟುಂಬಿಕ ನ್ಯಾಯಾಲಯದಲ್ಲಿ ಕೌನ್ಸಿಲಿಂಗ್ ಮೂಲಕ ಮತ್ತೆ ವಾಪಸ್ಸು ಮನೆಗೆ ಬಂದಿದ್ದರು. ಅಂದಿನಿಂದ ಈ ವಿಚಾರವಾಗಿ ಪವಿತ್ರ ಅವರ  ಸಹೋದರ ರಾಕೇಶ್ ದ್ವೇಷ ಇಟ್ಟುಕೊಂಡು ಗಲಾಟೆ ಮಾಡುತ್ತಿದ್ದ. ಮೇ 10ರಂದು ಸಂಜೆ 7.15ರ ಸುಮಾರಿಗೆ ನವೀನ್‌ ತನ್ನ ಹೆಂಡತಿಯನ್ನು ಕರೆತಂದು ಮನೆಗೆ ಬಿಡುವಂತೆ ರಾಕೇಶ್‌ಗೆ ಫೋನ್ ಮೂಲಕ ಹೇಳಿದ್ದಾನೆ. 

ಈ ವೇಳೆ ಇಬ್ಬರಿಗೂ ಫೋನ್‌ನಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆರೋಪಿ ರಾಕೇಶ್, ನವೀನ್‌ ಮತ್ತು ಅವರ ತಂದೆ ಬಿ.ಜಿ.ಗೋವಿಂದಯ್ಯ ಅವರಿಗೆ ಕರೆ ಮಾಡಿ, ಈಗ ನಾನು ಅಲ್ಲಿಗೆ ಬಂದು ಏನು ಮಾಡುತ್ತೇನೆ ನೋಡುತ್ತಿರಿ ಎಂದು ಹೆದರಿಸಿದ್ದಾನೆ. ಇದನ್ನು ಗಭೀರವಾಗಿ  ಪರಿಗಣಿಸದ ನವೀನ್ ಸಂಜೆ 7.30ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಾನೆ. ಈ ವೇಳೆ ಅಂದರೆ ರಾತ್ರಿ 7.30ರಿಂದ 8.45ರ ಮಧ್ಯೆ ಆರೋಪಿ ರಾಕೇಶ್, ನವೀನ್ ಅವರ ಮನೆಗೆ ಬಂದು ನವೀನ್ ಅವರ ತಂದೆ ಗೋವಿಂದಯ್ಯ (65) ಮತ್ತು ತಾಯಿ ಶಾಂತಮ್ಮ (58) ಅವರನ್ನು  ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. 

ಈ ಬಗ್ಗೆ ನವೀನ್ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ನವೀನ್ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಣನಕುಂಟೆ ಪಿಐ ಟಿ.ಎಂ.ಧರ್ಮೇಂದ್ರ ಅವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಬೆಂಗಳೂರು ದಕ್ಷಿಣ  ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸಫಟ್‌ ಅವರ ಸ್ಥಳ ಪರಿಶೀಲನೆ ನಡೆಸಿ, ಡಿಸಿಪಿ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಮಂಜುನಾಥ ಬಾಬು ಅವರ ನೇತೃತ್ವದಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಟಿ.ಎಂ.ಧರ್ಮೇಂದ್ರ  ಮತ್ತು ಸಿಬ್ಬಂದಿಯವರ ವಿಶೇಷ ತಂಡ ರಚನೆ ಮಾಡಿದ್ದರು. ಈ ತಂಡ ಕೊಲೆಯಾದ 24 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿ ಆರೋಪಿ ರಾಕೇಶ್ ಡಿ. (25)ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದ್ವೇಷದಿಂದ ಈ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಕೋಣನಕುಂಟೆ ಪೊಲೀಸ್ ಠಾಣೆಯ ಪಿಐ ಟಿ.ಎಂ,ಧರ್ಮೇಂದ್ರ, ಪಿಎಸ್ಐ ಶ್ರೀನಿವಾಸಪ್ರಸಾದ್, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪಿಎಸ್‌ಐ ಅಕ್ಷತಾ ಹಾಗೂ  ಕೋಣನಕುಂಟೆ ಠಾಣೆಯ ಸಿಬ್ಬಂದಿ ಸಿದ್ದೇಗೌಡ, ನಾಗರಾಜು, ಶೈಲೇಶ್, ಕುಮಾರ್, ಗೋಪಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗೋವಿಂದಪ್ಪ ಅವರು ಆರ್ ಬಿಐ ನಿವೃತ್ತ ನೌಕರನಾಗಿದ್ದು, ಮಗ ನವೀನ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾನೆ ಎಂದು ಪೊಲೀಸರು  ತಿಳಿಸಿದ್ದಾರೆ. ಆರಂಭದಲ್ಲಿ ಮಗನೇ ಈ ಕೊಲೆ ಮಾಡಿರಬಹುದು ಎಂದು ಶಂಕಿಸಿ ನವೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಆರೋಪಿ ರಾಕೇಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com