ಪ್ಲಾಸ್ಮಾ ಥೆರಪಿಗೊಳಪಟ್ಟಿದ್ದ ರಾಜ್ಯದ ಮೊದಲ ಕೊರೋನಾ ರೋಗಿ ಸಾವು

ರಾಜ್ಯದಲ್ಲಿ ನಡೆಸಿದ ಪ್ರಥಮ ಪ್ರಾಯೋಗಿಕ ಪ್ಲಾಸ್ಮಾ ಚಿಕಿತ್ಸೆ ವೈದ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ವೆಂಟಿಲೇಟರ್‌ ನೆರವಿನೊಂದಿಗೆ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ವೈದ್ಯರು ನಡೆಸಿದ ಕಡೆಯ ಪ್ರಯತ್ನವೂ ಫಲ ನೀಡಲಿಲ್ಲ.
ಸಾಂಂದರ್ಭಿಕ ಚಿತ್ರ
ಸಾಂಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ನಡೆಸಿದ ಪ್ರಥಮ ಪ್ರಾಯೋಗಿಕ ಪ್ಲಾಸ್ಮಾ ಚಿಕಿತ್ಸೆ ವೈದ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ವೆಂಟಿಲೇಟರ್‌ ನೆರವಿನೊಂದಿಗೆ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ವೈದ್ಯರು ನಡೆಸಿದ ಕಡೆಯ ಪ್ರಯತ್ನವೂ ಫಲ ನೀಡಲಿಲ್ಲ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಂಧ್ರ ಪ್ರದೇಶದ ಅನಂತಪುರ ಮೂಲಕ ವ್ಯಕ್ತಿಯೊಬ್ಬರು (P796) ಸಾವನ್ನಪ್ಪಿದ್ದಾರೆ. 60 ವರ್ಷ ವಯಸ್ಸಿನ ಈ ವ್ಯಕ್ತಿಗೆ ಈಗಾಗಲೇ ನಾನಾ ಆರೋಗ್ಯ ಸಮಸ್ಯೆಗಳಿದ್ದವು. ಡಯಾಬಿಟಿಸ್, ಲಿವರ್ ಸಮಸ್ಯೆ, ಹೈಪರ್ ಟೆನ್ಶನ್​ನಿಂದ ಮೊದಲೇ ಬಳಲುತ್ತಿದ್ದ ಈತನಿಗೆ ಕೊರೊನಾ ಸೋಂಕು ಕೂಡಾ ತಗುಲಿತ್ತು. ಹಾಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಮೊದಲೇ ಇವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದಿದ್ದರಿಂದ ಪ್ಲಾಸ್ಮಾ ಥೆರಪಿಯ ಪ್ರಯೋಗಕ್ಕೆ ಇವರು ಒಪ್ಪಿಕೊಂಡಿದ್ದರು. ಬೆಂಗಳೂರು ಮೆಡಿಕಲ್ ಕಾಲೇಜ್ & ರಿಸರ್ಚ್ ಇನ್ಸ್ಟಿಟ್ಯೂಟ್​ನಲ್ಲಿ ಡಾ. ವಿಶಾಲ್ ರಾವ್ ನೇತೃತ್ವದ ತಂಡ ಪ್ಲಾಸ್ಮಾ ಥೆರಪಿಯ ಪ್ರಯೋಗಗಳನ್ನು ಮಾಡಿತ್ತು.

ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಮಾ ಚಿಕಿತ್ಸೆ ಮಾಡಲು ಡ್ರಗ್‌ ಕಂಟ್ರೋಲರ್ ಜನರಲ್ ಆಫ್‌ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿತ್ತು. ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಮತ್ತು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗತ್ಯ
ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ರೋಗಿಗಳು ದೊರೆತಿರಲಿಲ್ಲ. 

ಆಂಧ್ರಪ್ರದೇಶದ ಅನಂತಪುರದ 60 ವರ್ಷದ ವ್ಯಕ್ತಿಯನ್ನು ಚಿಕಿತ್ಸೆಯಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ವಿಕ್ಟೋರಿಯಾ ವೈದ್ಯರು, ಕ್ಯಾನ್ಸರ್ ತಜ್ಞ ಡಾ.ಯು.ಎಸ್.ವಿಶಾಲ್ ರಾವ್ ನೇತೃತ್ವದ ವೈದ್ಯರ ತಂಡಕ್ಕೆ ಮೇ 11ರಂದು ಪ್ಲಾಸ್ಮಾ ಚಿಕಿತ್ಸೆ ಮಾಡಲು ಸೂಚಿಸಿದ್ದರು. ರೋಗಿಯು ತೀವ್ರ ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ ತೀವ್ರ ನಿಗಾ ಘಟಕದಲ್ಲಿರಿಸಿ, ವೆಂಟಿಲೇಟರ್ ಅಳವಡಿಸಲಾಗಿತ್ತು. ವಿಕ್ಟೋರಿಯಾ ವೈದ್ಯರು ಕೈಚೆಲ್ಲಿದ ಪರಿಣಾಮ ರೋಗಿಯ ಕುಟುಂಬ ಸದಸ್ಯರು ಕೂಡ ಚಿಕಿತ್ಸೆ ಮಾಡುವಂತೆ ಕೋರಿದ್ದರು. 

ಮೊದಲೇ ನಾನಾ ಸಮಸ್ಯೆಗಳಿದ್ದಿದ್ದರಿಂದ ಈ ರೋಗಿಗೆ ಪ್ಲಾಸ್ಮಾ ಥೆರಪಿ ಕೆಲಸ ಮಾಡದೇ ಇದ್ದಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದ್ದ  ಈ ಚಿಕಿತ್ಸಾ ವಿಧಾನದ ಪ್ರಯೋಗಕ್ಕೆ ಕರ್ನಾಟಕದಲ್ಲಿ ಹಿನ್ನಡೆ ಉಂಟಾಗಿರುವುದು ಬೇಸರದ ಸಂಗತಿ.

ಕೇವಲ ಒಂದು ಗಂಟೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಮಾಡ ಲಾಗಿತ್ತು. ಇದಾದ ಎರಡು ದಿನಗಳ ಬಳಿಕ ರೋಗಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು. ಆದರೆ, ಗುರುವಾರ ಮತ್ತೆ ಆರೋಗ್ಯದ ಸ್ಥಿತಿ ಹದಗೆಟ್ಟು, ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. 

ನಾವು ಮಾಡಿರುವುದು ಒಂದು ಪ್ರಯತ್ನ ,ಆದರೆ ಇದನ್ನು ವೈಫಲ್ಯ ಎಂದು ಹೇಳಲಾಗುವುದಿಲ್ಲ, ಪ್ಲಾಸ್ಮಾ ಥೆರಪಿಯ ಪರಿಣಾಮದ ಬಗ್ಗೆ ಇಷ್ಟು ಬೇಗನೇ ಅಂತಿಮ ನಿರ್ಧಾರಕ್ಕೆ ಬರಲಾಗದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com