ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿದ ನಂತರ ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಸುರೇಶ್‌ ಕುಮಾರ್

ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿರುವುದರಿಂದ ಅದನ್ನು ನಿವಾರಿಸುವ ಸಲುವಾಗಿ ಸೋಮವಾರ ನಡೆಯುವ ಶಿಕ್ಷಣ ತಜ್ಞರುಗಳ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್
Updated on: 

ಚಾಮರಾಜನಗರ: ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿರುವುದರಿಂದ ಅದನ್ನು ನಿವಾರಿಸುವ ಸಲುವಾಗಿ ಸೋಮವಾರ ನಡೆಯುವ ಶಿಕ್ಷಣ ತಜ್ಞರುಗಳ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಜೊತೆಗೆ ದೂರದರ್ಶನದಲ್ಲಿ ಬಿತ್ತರವಾಗುವ ಎಸ್.ಎಸ್.ಎಲ್.ಸಿ ಪುನರ್‌ಮನನ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿರುವುದರಿಂದ ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಬಿತ್ತರಿಸಲು ದೂರದರ್ಶನದ ಚಂದನ ವಾಹಿನಿಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ಹೇಳಿದ್ದಾರೆ.

ಇಂದು ಚಾಮರಾಜನಗರ ಜಿಲ್ಲೆಯ ದೇವಲಾಪುರ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು,
ಕೊರೋನಾ ವೈರಸ್‌ನ ಲಾಕ್‌ಡೌನ್ ನಿಮಿತ್ತ ಎಸ್.ಎಸ್.ಎಲ್..ಸಿ ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಪ್ರತಿನಿತ್ಯ ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಬಗ್ಗೆ ಸಾಕಷ್ಟು ಗೊಂದಲಗಳು ಉದ್ಬವವಾಗಿರುವುದರಿಂದ ಅಂತಿಮವಾಗಿ ಈ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ನಾಳೆ ಪದವಿಧರ ಹಾಗೂ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್‌ನ ಸದಸ್ಯರ ಜೊತೆಗೆ ವಿಡಿಯೋ ಕಾನ್ಪರೆನ್‌ಸ್ ಮೂಲಕ ಚರ್ಚಿಸಿ, ಸೋಮವಾರ ನಡೆಯುವ ಶಿಕ್ಷಣ ತಜ್ಞರ ಸಮಾಲೋಚನ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು, ಎಸ್.ಎಸ್.ಎಲ್.ಸಿ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆಯ ಸಲಹೆ ಪಡೆದು ಪ್ರಕಟಿಸಲಾಗುವುದು ಎಂದರು.

ಈಗಾಗಲೇ ಕೆಲವೊಂದು ದಾನಿಗಳು ಎಸ್.ಎಸ್.ಎಲ್.ಸಿ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಿಸಲು ಮುಂದೆ ಬಂದಿದ್ದು, ಈ ಬಾರಿ ಕೊವಿಡ್-19 ಇರುವುದರಿಂದ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು. ಜೊತೆಗೆ ವಿದ್ಯಾರ್ಥಿಗಳು ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುವುದು. ಈಗಾಗಲೇ ದೂರದರ್ಶನದ ಚಂದನ ವಾಹಿನಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪುನರ್‌ಮನನ ಕನ್ನಡ, ಇಂಗ್ಲಿಷ್, ಹಿಂದಿ ತರಗತಿಗಳು ನಡೆಯುತ್ತಿದ್ದು, ಇದಕ್ಕೆ ರಾಜ್ಯದೆಲ್ಲೆಡೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮುಂದಿನ ದಿನಗಳಲ್ಲಿ ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಬಿತ್ತರಿಸಲು ದೂರದರ್ಶನದ ಚಂದನ ವಾಹಿನಿಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸದ್ಬಳಕೆ ಮಾಡಿಕೊಳ್ಳಲಾಗುವುದೆಂದು ತಿಳಿಸಿದರು.

ಈ ಬಗ್ಗೆ ದೂರದರ್ಶನದ ನಿರ್ದೇಶಕರೊಂದಿಗೆ ಚರ್ಚಿಸಲಾಗಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ ದೂರದರ್ಶನದ ಚಂದನ ವಾಹಿನಿಯಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗುವಂತೆ ಬಿತ್ತರಿಸಲಾಗುವುದು. ಈಗಾಗಲೇ ಕೆಲವೊಂದು ಗ್ರಾಮ ಪಂಚಾಯ್ತಿಗಳು ದೂರದರ್ಶನದ ಚಂದನ ವಾಹಿನಿಯಲ್ಲಿ ಬಿತ್ತರವಾಗುವ ಎಸ್.ಎಸ್.ಎಲ್.ಸಿ ಪುನರ್‌ಮನನದ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ಅರಿವು ಮೂಡಿಸುತ್ತಿದ್ದು, ರಾಜ್ಯಾದ್ಯಂತ ಇರುವ ಮತ್ತಷ್ಟು ಗ್ರಾಮ ಪಂಚಾಯ್ತಿಗಳು ಇಂತಹ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮುಂದಾಗಬೇಕು ಎಂದರು.
 
ಈಗಾಗಲೇ ಶೇ.90ರಷ್ಟು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪುನರ್‌ಮನನ ತರಗತಿಗಳನ್ನು ಸದುಪಯೋಗಪಡಿಸಿಕೊಂಡಿದ್ದು, ಶಿಕ್ಷಣ ಇಲಾಖೆಯು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ರಾಜ್ಯದಲ್ಲಿರುವ ಒಟ್ಟು 48 ಲಕ್ಷ ವಿದ್ಯಾರ್ಥಿಗಳ ಕುಟುಂಬಗಳಲ್ಲಿ 25ಲಕ್ಷಕ್ಕೂ ಹೆಚ್ಚು ಕುಟುಂಬಗಳಲ್ಲಿ ಸ್ಮಾರ್ಟ್‌ಪೋನ್ ಹಾಗೂ ಇಂಟರ್‌ನೆಟ್ ಸೌಲಭ್ಯವಿದ್ದು, ಅವರಿಗೂ ಕೂಡ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಬಿತ್ತರಿಸಲಾಗುವುದು. ಆನ್‌ಲೈನ್ ತರಗತಿಗಳನ್ನು ಕೆಲವೊಂದು ಶಿಕ್ಷಣ ಸಂಸ್ಥೆಗಳು ಎಲ್.ಕೆ.ಜಿ ಹಾಗೂ ಯುಕೆಜಿ ಮಕ್ಕಳಿಗೆ ನಡೆಸುತ್ತಿರುವುದು ಸರಿಯಲ್ಲ. ಮಕ್ಕಳ ಕಲಿಕೆಯ ಹಂತವನ್ನು ಗುರುತಿಸಿ ಆನ್‌ಲೈನ್ ಶಿಕ್ಷಣ ನೀಡುವುದು ಸೂಕ್ತ. ಈ ನಿಟ್ಟಿನಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಜರುಗಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಕೆಲವು ಸುಳ್ಳು ವದಂತಿಗಳ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳದೇ, ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಸಿದ್ದರಾಗಬೇಕೆಂದು ಮನವಿ ಮಾಡಿದರು.

-ಗೂಳಿಪುರ ನಂದೀಶ.ಎಂ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com