ಲಾಕ್‌ಡೌನ್: ಹೈನೋದ್ಯಮದತ್ತ ಜನರ ಚಿತ್ತ, ಚಾಮುಲ್‌ಗೆ ಹಾಲು ಉತ್ಪಾದನೆಯಲ್ಲಿ ಹೆಚ್ಚಳ!

ಸಾಮಾಜಿಕ ಪಿಡುಗಾಗಿರುವ ಕೊರೊನಾ ವೈರಸ್‌ನ್ನು ನಿಯಂತ್ರಿಸುವ ಹಾಗೂ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ಜೀವನೋಪಾಯಕ್ಕಾಗಿ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗಿದ್ದ ಬಡ ಕೂಲಿಕಾರ್ಮಿಕರು ಮತ್ತೆ ತಮ್ಮ ತವರಿನ ಗ್ರಾಮೀಣ ಪ್ರದೇಶದತ್ತ ಹಿಂತಿರುಗಿದ್ದಾರೆ. ಗ್ರಾಮಕ್ಕೆ ಹಿಂತಿರುಗಿದ ವಲಸೆ ಕಾರ್ಮಿಕರು ಈಗ ಹೈನುಗಾರಿಕೆಯತ್ತ ತಮ್ಮ ಚಿತ್ತ ಹರಿಸಿರ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಾಮರಾಜನಗರ: ಸಾಮಾಜಿಕ ಪಿಡುಗಾಗಿರುವ ಕೊರೊನಾ ವೈರಸ್‌ನ್ನು ನಿಯಂತ್ರಿಸುವ ಹಾಗೂ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ಜೀವನೋಪಾಯಕ್ಕಾಗಿ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗಿದ್ದ ಬಡ ಕೂಲಿಕಾರ್ಮಿಕರು ಮತ್ತೆ ತಮ್ಮ ತವರಿನ ಗ್ರಾಮೀಣ ಪ್ರದೇಶದತ್ತ ಹಿಂತಿರುಗಿದ್ದಾರೆ. ಗ್ರಾಮಕ್ಕೆ ಹಿಂತಿರುಗಿದ ವಲಸೆ ಕಾರ್ಮಿಕರು ಈಗ ಹೈನುಗಾರಿಕೆಯತ್ತ ತಮ್ಮ ಚಿತ್ತ ಹರಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನ ಉತ್ಪಾದನೆಯು ಹೆಚ್ಚಳವಾಗಿದೆ. ಈ ಕುರಿತು ಒಂದು ವರದಿ.

ಭಾರತ ಹಳ್ಳಿಗಳ ದೇಶ. ವ್ಯವಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಗ್ರಾಮೀಣ ಪ್ರದೇಶದ ಕಾರ್ಮಿಕರು ಇತ್ತಿಚಿನ ವರ್ಷಗಳಲ್ಲಿ ಪಟ್ಟಣ ಪ್ರದೇಶಗಳ ವ್ಯಾಮೋಹಕ್ಕೊಳಗಾಗಿ ಸದೃಢ ಆರ್ಥಿಕ ಸ್ವಾವಲಂಬನೆಯನ್ನು ಅರಸಿ, ಪಟ್ಟಣ ಪ್ರದೇಶಗಳಿಗೆ ವಲಸೆ ಹೊಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಕೋವಿಡ್ 19ನ ಪರಿಣಾಮವಾಗಿ ಕೇಂದ್ರ ಸರ್ಕಾರವು ಅದನ್ನು ನಿಯಂತ್ರಿಸುವ ಸಲುವಾಗಿ ಲಾಕ್‌ಡೌನ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಪರಿಣಾಮವಾಗಿ ಅನೇಕ ಕೈಗಾರಿಕೆಗಲು ವ್ಯಾಪಾರ ಕೇಂದ್ರಗಳು ತಮ್ಮ ಎಂದಿನ ವಹಿವಾಟನ್ನು ಸ್ಥಗಿತಗೊಳಿಸಿದ್ದರಿಂದ, ಜೊತೆಗೆ ಕೊರೊನಾ ಭೀತಿ ವಲಸೆ ಕಾರ್ಮಿಕರಿಗೆ ಆವರಿಸಿದ್ದರಿಂದ, ಅವರು ಮತ್ತೇ ತಮ್ಮ ಗ್ರಾಮೀಣ ಪ್ರದೇಶದತ್ತ ಹಿಂತಿರುಗಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಹಿಂತಿರುಗಿದ ಮೇಲೆ ಕೆಲವೊಂದು ಮಂದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಹಲವಾರು ಮಂದಿ ಹೈನೋಧ್ಯಮದ ಕಡೆ ತಮ್ಮ ಚಿತ್ತ ಹರಿಸಿದ್ದಾರೆ. ಪ್ರತಿನಿತ್ಯ ತಮ್ಮ ಮನೆಯಲ್ಲಿರುವ ಆಕಳುಗಳಿಗೆ ಮೇವು ತರುವುದು, ಚೆನ್ನಾಗಿ ಅವುಗಳನ್ನು ಪೌಷ್ಟಿಕಾಂಶಯುಕ್ತ ಆಹಾರ ನೀಡಿ, ಆರೈಕೆ ಮಾಡುವುದರಲ್ಲಿ ನಿರತಾಗಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿನ ಹೈನೋಧ್ಯಮ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಚೇತರಿಕೆ ಕಂಡು, ಹಾಲಿನ ಉತ್ಪಾದನೆ ಜಾಸ್ತಿಯಾಗಿ ಅದನ್ನು ತಮ್ಮ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ವಾರಕ್ಕೊಮ್ಮೆ ಹಣವನ್ನು ಬಟಾವಣೆ ಮಾಡಿಕೊಂಡು, ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ.

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟಕ್ಕೆ ಲಾಕ್‌ಡೌನ್‌ಗಿಂತ ಮುಂಚೆ ತನ್ನ ವ್ಯಾಪ್ತಿಯಲ್ಲಿರುವ 466 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಾಗೂ 102 ಬಿಎಂಸಿ ಕೇಂದ್ರಗಳಿಂದ ಜಿಲ್ಲೆಯ 38 ಸಾವಿರ ಹಾಲು ಉತ್ಪಾದಕರು ಸರಬರಾಜು ಮಾಡುತ್ತಿದ್ದ 2 ಲಕ್ಷ ಲೀ. ಹಾಲು ಸಂಗ್ರಹಣೆಯಾಗುತ್ತಿತ್ತು. ಆದರೆ ಈಗ ಲಾಕ್‌ಡೌನ್ ಸಮಯದಲ್ಲಿ ಪ್ರತಿನಿತ್ಯ ಚಾಮುಲ್‌ಗೆ 2 ಲಕ್ಷದ 40 ಸಾವಿರ ಲೀ. ಹಾಲು ಸರಬರಾಜಾಗುತ್ತಿರುವುದರಿಂದ ಚಾಮುಲ್ ಅದನ್ನು ಸ್ಥಳಿಯವಾಗಿ ಮಾರಾಟಮಾಡುವುದರ ಜೊತೆಗೆ, ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸೇರಿದಂತೆ ಇನ್ನಿತರ ಹಾಲಿನ ಉಪ-ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದು, ಹೈನೊದ್ಯಮದ ರೈತರಿಗೆ ನೆರವಿನ ಆಸರೆಯಾಗಿ ನಿಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ಸರ್ಕಾರವು ಪ್ರತಿ ಲೀ ಹಾಲಿಗೆ ನೀಡುವ 5 ರೂ ಪ್ರೋತ್ಸಾಹ ಧನವು ಕೂಡ ಹೈನೋದ್ಯಮವು ಮತ್ತಷ್ಟು ಚುರುಕುಗೊಳ್ಳಲು ಸಾಧ್ಯವಾಗಿದೆ. ಜೊತೆಗೆ ಕೇಂದ್ರ ಸರ್ಕಾರವು ಕೂಡ ಹೈನೋದ್ಯಮಕ್ಕೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಆಸರೆಯಾಗಿ ನಿಂತಿರುವುದು ಹೈನುಗಾರರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. 

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಉತ್ಪಾದನಾ ವಿಭಾಗದ ಉಪವ್ಯವಸ್ಥಾಪಕರಾದ ಸೋಮಶೇಕರ್ ಮಾತನಾಡುತ್ತಾ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗಿದ್ದ ಸಾಕಷ್ಟು ಜನ ಲಾಕ್‌ಡೌನ್‌ನಿಂದ ಗ್ರಾಮಾಂತರ ಪ್ರದೇಶಗಳಿಗೆ ಹಿಂತಿರುಗಿ ಹೈನೋಧ್ಯಮದ ಕಡೆ ಮುಖ ಮಾಡಿರುವುದರಿಂದ ಚಾಮುಲ್‌ಗೆ ಪ್ರತಿನಿತ್ಯ 2 ಲಕ್ಷ ಲೀ. ಹಾಲು ಸರಬರಾಜಾಗುತ್ತಿದ್ದದ್ದು ಈಗ 40 ಸಾವಿರ ಲೀ. ಹಾಲು ಹೆಚ್ಚಳವಾಗಿದೆ. ಇದನ್ನು ಚಾಮುಲ್ ಸ್ಥಳಿಯವಾಗಿ ಮಾರಾಟ ಮಾಡುವುದರ ಜೊತೆಗೆ, ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸೇರಿದಂತೆ ಇನ್ನಿತರ ಹಾಲಿನ ಉಪ-ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದು, ಹೈನೊದ್ಯಮದ ರೈತರಿಗೆ ನೆರವಿನ ಆಸರೆಯಾಗಿ ನಿಂತಿದೆ ಎಂದರು.

ಯರಗಂಬಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮಹದೇವಪ್ಪ ಮಾತನಾಡಿ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗಿದ್ದ ಸಾಕಷ್ಟು ಜನರು ಗ್ರಾಮಕ್ಕೆ ಹಿಂತಿರುಗಿರುವುದರಿಂದ ಲಾಕ್‌ಡೌನ್‌ಗಿಂತ ಮುಂಚೆ ತಮ್ಮ ಸಂಘಕ್ಕೆ ಪ್ರತಿನಿತ್ಯ 300ಲೀ ಹಾಲು ಸರಬರಾಜಾಗುತ್ತಿತ್ತು. ಈಗ ಅದು 500 ಲೀ ಗೆ ಹೇರಿಕೆಯಾಗಿದೆ. ವಾರಕ್ಕೊಮ್ಮೆ ತಮ್ಮ ಸಂಘವು ಸಕಾಲಕ್ಕೆ ಸರಿಯಾಗಿ ಹೈನುಗಾರರಿಗೆ ಹಣ ಬಟಾವಣೆ ಮಾಡುವುದರಿಂದ ಅವರ ಜೀವನೋಪಾಯಕ್ಕೆ ದಾರಿಯಾಗಿದೆ ಎಂದರು.

ಯರಗಂಬಳ್ಳಿ ಗ್ರಾಮದ ಹಾಲು ಉತ್ಪಾದಕ ಶಿವಕುಮಾರ್ ಮಾತನಾಡಿ ಕೋವಿಡ್-19ನ ಪರಿಣಾಮದಿಂದ ಕೂಲಿ ಕೆಲಸಗಳು ಸಿಗದೇ ಸಂಕಷ್ಟಕ್ಕೀಡಾದ ತಮ್ಮನ್ನು ತಮ್ಮ ಮನೆಯಲ್ಲಿದ್ದ ಮೂರು ಹಸುಗಳು ಕೈಹಿಡಿದಿದ್ದು, ಪ್ರತಿನಿತ್ಯ 16 ಲೀ ಹಾಲನ್ನು ನೀಡುತ್ತಿರುವುದರಿಂದ ಅದನ್ನು ತಮ್ಮೂರಿನ ಡೈರಿಗೆ ಹಾಕುತ್ತಿದ್ದೇವೆ. ಇದರಿಂದ ಪ್ರತಿವಾರ ನಮಗೆ ಎರಡುಸಾವಿರ ರೂಗಳು ಲಭಿಸುತ್ತಿದ್ದು, ಕುಟುಂಬದ ನಿರ್ವಹಣೆಗೆ ಸಹಾಯವಾಗಿದೆ ಎಂದರು.

ಯರಗಂಬಳ್ಳಿ ಗ್ರಾಮದ ಮತ್ತೋರ್ವ ಹಾಲು ಉತ್ಪಾದಕ ನಾಗಣ್ಣ ಮಾತನಾಡಿ ಕೊರೊನಾ ಸಂಕಷ್ಟದಿಂದ ಕೂಲಿ ಕೆಲಸ ಸಿಗದೇ ಕಷ್ಟ ಅನುಭವಿಸುತ್ತಿದ್ದ ನಮಗೆ ಹೈನೋದ್ಯಮ ಕೈಹಿಡಿದಿದೆ. ತಮ್ಮ ಮನೆಯಲ್ಲಿರುವ ಆಕಳುಗಳು ದಿನಕ್ಕೆ 24 ಲೀ ಹಾಲು ನಿಡುತ್ತಿದ್ದು, ಅದನ್ನು ತಮ್ಮೂರಿನ ಡೈರಿಗೆ ಹಾಕುತ್ತಿದ್ದೇವೆ. ಇದರಿಂದ ನಮಗೆ ವಾರಕ್ಕೊಮ್ಮೆ ನಾಲ್ಕು ಸಾವಿರ ರೂಗಳು ಲಭಿಸುತ್ತಿದ್ದು, ಹೆಂಡತಿ ಮಕ್ಕಳನ್ನು ಸಾಕಿ ಸಲಹಲು ಸಹಕಾರಿಯಾಗಿದೆ ಎಂದರು.

ವರದಿ: ಗುಳಿಪುರ ನಂದೀಶ .ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com