
ಬೆಂಗಳೂರು: ರಾಜ್ಯಾದ್ಯಂತ ಉದ್ಯಾನವನಗಳನ್ನು ಬೆಳಗ್ಗೆ 7ರಿಂದ 10 ಗಂಟೆ ಹಾಗೂ ಸಂಜೆ 4 ರಿಂದ 7 ಗಂಟೆಯವರೆಗೂ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಪ್ರಶಾಂತ್ ನಗರದಲ್ಲಿ 309 ಹಾಸಿಗೆ ಸಾಮರ್ಥ್ಯದ ಹೆರಿಗೆ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯಾನವನಗಳಿಗೆ ಸಂಬಂಧಿಸಿದ ಆದೇಶ ಶೀಘ್ರದಲ್ಲಿಯೇ ಹೊರಬೀಳಲಿದೆ. ಆದಾಗ್ಯೂ, ನಿರ್ಬಂಧಗಳು ಇದೇ ರೀತಿಯಲ್ಲಿ ಮುಂದುವರೆಯಲಿವೆ ಎಂದರು.
ಉದ್ಯಾನವನಗಳಲ್ಲಿ ಜನರು ಕುಳಿತುಕೊಳ್ಳಲು ಮತ್ತು ವಿಹಾರ ಮಾಡಲು ಅವಕಾಶ ನೀಡುವುದಿಲ್ಲ, ಜಿಮ್ ಸಲಕರಣೆಗಳನ್ನು ಬಳಸುವಂತಿಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸುತ್ತ ಅಷ್ಟೋಂದು ಜನ ಸೇರಿದರೆ ಎಂತಹ ಸಂದೇಶ ನೀಡಲಿದೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.
ಈ ಮಧ್ಯೆ, ಹೊರದೇಶದಿಂದ ಬಂದವರಲ್ಲಿ ಕೊರೋನಾಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ಭೀತಿಯನ್ನು ಹೆಚ್ಚಿಸಿದೆ ಎಂದು ಟ್ವೀಟ್ ಮಾಡಿದ್ದ ವೈದ್ಯಕೀಯ ಸಚಿವ ಸುಧಾಕರ್ ಹೇಳಿಕೆಯನ್ನು ವಸತಿ ಸಚಿವ ವಿ. ಸೋಮಣ್ಣ ಖಂಡಿಸಿದ್ದಾರೆ. ಸುಧಾಕರ್ ವೈದ್ಯರಾಗಿದ್ದು, ಇಂತಹ ಹೇಳಿಕೆಗಳನ್ನು ನೀಡಬಾರದು ಎಂದಿದ್ದಾರೆ.
Advertisement