ಡಿ. ವಿ. ಸದಾನಂದಗೌಡ ಸಚಿವರೊಂದಿಗೆ ಸಭೆಯ ಚಿತ್ರ
ಡಿ. ವಿ. ಸದಾನಂದಗೌಡ ಸಚಿವರೊಂದಿಗೆ ಸಭೆಯ ಚಿತ್ರ

ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ವಿವಾದಕ್ಕೆ ಗುರಿಯಾದ ಸದಾನಂದಗೌಡ!

ದೆಹಲಿಯಿಂದ ವಿಮಾನವೊಂದರಲ್ಲಿ ಸೋಮವಾರ ಬೆಂಗಳೂರಿಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.
Published on

ಬೆಂಗಳೂರು: ದೆಹಲಿಯಿಂದ ವಿಮಾನವೊಂದರಲ್ಲಿ ಸೋಮವಾರ ಬೆಂಗಳೂರಿಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.

ದೆಹಲಿ ಸೇರಿದಂತೆ ಇನ್ನಿತರೆ ರಾಜ್ಯ ಮತ್ತು ದೇಶಗಳಿಂದ ರಾಜ್ಯಕ್ಕೆ ಬರುವ ಎಲ್ಲಾ ಜನರು ಕ್ವಾರಂಟೈನ್ ನಲ್ಲಿರಬೇಕು ಎಂದು ರಾಜ್ಯಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ, ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಡಿ. ವಿ. ಸದಾನಂದಗೌಡ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡದೆ ಕಾರಿನಲ್ಲಿ ತೆರಳಿದ್ದಾರೆ. 

ಸಚಿವರ ಈ ನಡೆ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಸದಾನಂದಗೌಡರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ನಿಯಮಗಳು ಸಾಮಾನ್ಯ ಜನರಿಗೆ ಮಾತ್ರ ಅನ್ವಯವಾಗಲಿವೆ. ಸಚಿವರು ಸೇರಿದಂತೆ ಇನ್ನಿತರ ವಿವಿಐಪಿಗಳಿಗೆ ನಿಯಮಗಳು ಅನ್ವಯವಾಗುವುದಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು ಮತ್ತಿತರ ರಾಜ್ಯಗಳಿಂದ ಬರುವವರು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ಕಡ್ಡಾಯ ಮಾಡಲಾಗಿದೆ. ಆದರೆ, ತಾನು ಅತ್ಯವಶ್ಯಕ ಸೇವೆ ವ್ಯಾಪ್ತಿಗೆ ಬರುವ ಔಷಧ ಸಚಿವಾಲಯದ ಮುಖ್ಯಸ್ಥನಾಗಿದ್ದು, ಉತ್ಪಾದನೆ, ಪೂರೈಕೆ, ಕೊನೆಯವರೆಗೆ ತಲುಪಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಹಾಗಾಗಿ ಕ್ವಾರಂಟೈನ್ ಗೆ ಒಳಪಡಬೇಕಾದ ಅಗತ್ಯವಿಲ್ಲ ಎಂಬುದಾಗಿ ಡಿ. ವಿ. ಸದಾನಂದಗೌಡ ನುಣುಚಿಕೊಂಡಿದ್ದಾರೆ.

ಡಿ. ವಿ. ಸದಾನಂದಗೌಡರು ಔಷಧ ಸಚಿವಾಲವನ್ನು ನಿರ್ವಹಿಸುವುದರಿಂದ ಅವರಿಗೆ ವಿನಾಯಿತಿ ಇದೆ. ಈ ಸಂಬಂಧ ಕೇಂದ್ರಸರ್ಕಾರ ಈಗಾಗಲೇ ಆದೇಶ ಕೂಡಾ ಹೊರಡಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ಕೂಡಾ ಸಮರ್ಥಿಸಿಕೊಂಡಿದ್ದಾರೆ.

ಯಾರು ಏನೇ ಹೇಳಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ, ದೆಹಲಿ ಮತ್ತಿತರ ಆರು ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು ಏಳು ದಿನಗಳ ಕ್ವಾರಂಟೈನ್ ಗೆ ಒಳಪಡಬೇಕು, ನಂತರ ನಡೆಸಲಾಗುವ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಗೃಹ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ. ಇತರ ರಾಜ್ಯಗಳಿಂದ ಬಂದವರು 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com