ಸಿದ್ದರಾಮಯ್ಯ
ಸಿದ್ದರಾಮಯ್ಯ

ಗ್ರಾ.ಪಂಗೆ ನಾಮನಿರ್ದೇಶನ ಸದಸ್ಯರ ನೇಮಕ: ಸರ್ಕಾರದ ವಿರುದ್ಧ ಕಾನೂನು ಹೋರಾಟ- ಸಿದ್ದರಾಮಯ್ಯ

ವಿಪಕ್ಷಗಳ  ತೀವ್ರ ವಿರೋಧದ ನಡುವೆಯೂ ಸರ್ಕಾರ ಗ್ರಾಮಪಂಚಾಯಿತಿ ಚುನಾವಣೆಯನ್ನು ಮುಂದೂಡಿ  ನಾಮನಿರ್ದೇಶನ ಸದಸ್ಯರ ನೇಮಕಕ್ಕೆ ಮುಂದಾಗಿರುವುದರ ವಿರುದ್ಧ ಕಾಂಗ್ರೆಸ್  ಗ್ರಾಮಪಂಚಾಯಿತಿ ಮಟ್ಟದಲ್ಲಿ ಹೋರಾಟ ನಡೆಸಲು ಸಜ್ಜಾಗಿದೆ
Published on

ಬೆಂಗಳೂರು: ವಿಪಕ್ಷಗಳ  ತೀವ್ರ ವಿರೋಧದ ನಡುವೆಯೂ ಸರ್ಕಾರ ಗ್ರಾಮಪಂಚಾಯಿತಿ ಚುನಾವಣೆಯನ್ನು ಮುಂದೂಡಿ  ನಾಮನಿರ್ದೇಶನ ಸದಸ್ಯರ ನೇಮಕಕ್ಕೆ ಮುಂದಾಗಿರುವುದರ ವಿರುದ್ಧ ಕಾಂಗ್ರೆಸ್  ಗ್ರಾಮಪಂಚಾಯಿತಿ ಮಟ್ಟದಲ್ಲಿ ಹೋರಾಟ ನಡೆಸಲು ಸಜ್ಜಾಗಿದೆ. ಅದರೊಂದಿಗೆ ನಿಯಮಬಾಹಿರ  ಕ್ರಮವನ್ನು ವಿರೋಧಿಸಿ ಕಾನೂನಿನ ಮೂಲಕ ಹೋರಾಟ ಮಾಡಲು ಹೊರಟಿರುವುದಾಗಿ ವಿಪಕ್ಷ ನಾಯಕ  ಸಿದ್ದರಾಮಯ್ಯ ಹೇಳಿದ್ದಾರೆ.

ಗ್ರಾಮಪಂಚಾಯಿತಿ ಚುನಾವಣೆಯನ್ನು ಆಯೋಗ  ಮುಂದೂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ತಮಗೆ ಸರ್ಕಾರ ಚುನಾವಣೆ  ಮುಂದೂಡಿಕೆ ಮಾಡುವ ಬಗ್ಗೆ ಮೊದಲಿನಿಂದಲೂ ಅನುಮಾನವೇ ಇತ್ತು. ಇದಕ್ಕಾಗಿಯೇ ಚುನಾವಣಾ  ಆಯುಕ್ತರನ್ನು ಭೇಟಿ ಮಾಡಿ ನಿಗದಿತ ಸಮಯಕ್ಕೆ ಚುನಾವಣೆ ನಡೆಸುವಂತೆ ಮನವಿ  ಮಾಡಿದ್ದೆವು. ಈಗ ಅನುಮಾನ ನಿಜವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ  ಸರ್ಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಚುನಾವಣೆ ಎದುರಿಸಲಾಗದ ಪುಕ್ಕಲು  ಸರ್ಕಾರ ನಾಮನಿರ್ದೇಶನದ ಸದಸ್ಯರ ಮೂಲಕ ಅಡ್ಡಮಾರ್ಗದಲ್ಲಿ ಗ್ರಾಮಪಂಚಾಯತ್ ಮೇಲೆ  ಸ್ವಾಮ್ಯ ಸ್ಥಾಪಿಸಲು ಹೊರಟಿರುವುದು ನಾಚಿಕೆಗೇಡಿನ ನಡವಳಿಕೆ  ಎಂದು ಟೀಕಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಲಾಗುವುದು.ಕರ್ನಾಟಕ  ಪಂಚಾಯತ್ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಸದೆ  ಆಡಳಿತ ಸಮಿತಿ ರಚಿಸುವಂತಿಲ್ಲ. ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿ  ಟ್ವೀಟ್ ಮಾಡಿದ್ದಾರೆ.

ಗ್ರಾಮಪಂಚಾಯತ್ ಚುನಾವಣೆಯನ್ನು ಮುಂದೂಡುವ ಮೂಲಕ ರಾಜ್ಯ  ಚುನಾವಣಾ ಆಯೋಗ ಆಡಾಳಿತರೂಢ ಪಕ್ಷ  ಬಿಜೆಪಿ ಹಾಕಿದ ತಾಳಕ್ಕೆ ತಕ್ಕ ಹಾಗೆ ಕುಣಿದಿದೆ  ಎಂದಿರುವ ಅವರು, ಗ್ರಾಮ ಪಂಚಾಯತ್ ಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿರುವುದು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ಕ್ಕೆ ಬಗೆದ ಅಪಚಾರ. ಈ  ಪ್ರಜಾಪ್ರಭುತ್ವ ವಿರೋಧಿ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com