ಕುಲಪತಿ ಪದವಿಗೆ ಹಣ ನೀಡಿ ಕೈ ಸುಟ್ಟುಕೊಂಡಿದ್ರಾ ಪ್ರೊ. ಅಶೋಕ್ ಕುಮಾರ್? ನ್ಯಾಯಾಂಗ ತನಿಖೆಗೆ ಡಿಕೆಶಿ ಒತ್ತಾಯ

ಪ್ರೊಫೆಸರ್ ಅಶೋಕ್ ಕುಮಾರ್ ಆತ್ಮಹತ್ಯೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಂಕೆ ವ್ಯಕ್ತಪಡಿಸಿದ್ದು, ಆತ್ಮಹತ್ಯೆ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರೊಫೆಸರ್ ಅಶೋಕ್ ಕುಮಾರ್, ಡಿಕೆ ಶಿವಕುಮಾರ್
ಪ್ರೊಫೆಸರ್ ಅಶೋಕ್ ಕುಮಾರ್, ಡಿಕೆ ಶಿವಕುಮಾರ್
Updated on

ಬೆಂಗಳೂರು: ಪ್ರೊಫೆಸರ್ ಅಶೋಕ್ ಕುಮಾರ್ ಆತ್ಮಹತ್ಯೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಂಕೆ ವ್ಯಕ್ತಪಡಿಸಿದ್ದು, ಆತ್ಮಹತ್ಯೆ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರೊಫೆಸರ್ ಅಶೋಕ್ ಕುಮಾರ್ ಆತ್ಮಹತ್ಯೆ ಬಗ್ಗೆ ನಿಗೂಢತೆ ಇದೆ. ನಾಲ್ಕು ಜನ ಕುಲಪತಿಗಳ ನೇಮಕದಲ್ಲಿ ವ್ಯಾಪಾರ ವಹಿವಾಟು ನಡೆಸಲಾಗಿದೆ. ಹಣ ಕೊಟ್ಟರೂ ಕುಲಪತಿಯಾಗಿ ನೇಮಕವಾಗಲು ಆಗಲಿಲ್ಲ, ತಾವು ಕೊಟ್ಟ ಹಣ ವಾಪಸ್ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಆತ್ಮಹತ್ಯೆಯಲ್ಲಿ ಯಾರ ಕೈವಾಡ ಇದೆಯೋ ಗೊತ್ತಿಲ್ಲ. ಹಣವನ್ನು ಯಾವ ಮಂತ್ರಿ ತೆಗೆದುಕೊಂಡಿದ್ದರೋ ಗೊತ್ತಿಲ್ಲ. 2.5 ಕೋಟಿ ಹಣ ಕೊಟ್ಟಿದ್ದರು ಎಂದು ಚರ್ಚೆ ನಡೆಯುತ್ತಿದೆ. ಅವರಿಗೆ ಸ್ವಲ್ಪ ದಿನ ಕಾಯುವಂತೆ ಹಣ ಪಡೆದವರು ಹೇಳಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡ ಇದರಲ್ಲಿ ಇರುವಂತೆ ಕಾಣುತ್ತಿದೆ. ವಿಧಾನಸೌಧದಲ್ಲಿ ಯಾವ ಗೋಡೆಗೆ ತಾಕಿದರೂ ಹಣದ ವ್ಯವಹಾರ ನಡೆಯುತ್ತದೆ. ಕುಲಪತಿ ಪದವಿಯನ್ನು ಈ ಸರ್ಕಾರದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.

ಇಡೀ ದೇಶ ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿದೆ. ಮಾನವೀಯತೆ ದೃಷ್ಟಿಯಿಂದ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇವೆ. ಎಲ್ಲ ವರ್ಗದ ಜನತೆ, ಉದ್ಯೋಗಿಗಳು ಮತ್ತು ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಕೇಂದ್ರ ರಾಜ್ಯ.ಸರ್ಕಾರ ಜನರಿಗೆ ಸಹಾಯ ಮಾಡಿರುವ ಪಟ್ಟಿ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದನ ಸಿಕ್ಕಿಲ್ಲ ಎಂದು ಕಿಡಿಕಾರಿದರು.

ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಆದರೆ ರಾಜ್ಯ ಸರ್ಕಾರ ಪ್ರತಿ ಯೂನಿಟ್ ಗೆ 40 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಖಂಡಿಸುತ್ತದೆ. ಇದು ಎಲ್ಲ ವರ್ಗಗಳ ವಿರೋಧಿ ಧೋರಣೆಯಾಗಿದೆ. ರೈತರು, ಉದ್ಯಮಿಗಳು ಮಧ್ಯಮ ವರ್ಗದ ಜನರ ವಿರೋಧಿಯಾಗಿದೆ. ಸರ್ಕಾರ ದರ ಏರಿಕೆಯನ್ನು ಕೈ ಬಿಡಬೇಕು ಇನ್ನು ಒಂದೂವರೆ ವರ್ಷ ಯಾವುದೇ ದರ ಏರಿಕೆ ಮಾಡಬಾರದು. ಈಗಿರುವ ದರವನ್ನೆ ಕಡಿಮೆ ಮಾಡಬೇಕೆನ್ನುವುದು ಕಾಂಗ್ರೆಸ್ ಬೇಡಿಕೆಯಾಗಿದೆ ಎಂದರು.

ಸರ್ಕಾರ ಒಂದು ವಾರದಲ್ಲಿ ವಿದ್ಯುತ್ ದರ ಏರಿಕೆಯನ್ನು ಸರ್ಕಾರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನವೆಂಬರ್ 17 ರಿಂದ 20 ರವರೆಗೆ ಜಿಲ್ಲಾ ಮಟ್ಟದಲ್ಲಿ ಎಸ್ಕಾಂ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದು. ನವೆಂಬರ್ 23 ರಿಂದ 28 ರನವರೆಗೆ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com