ಭೂಗತ ಪಾತಕಿ ರವಿ ಪೂಜಾರಿ 10 ದಿನಗಳ ಕಾಲ ಮುಂಬೈ ಪೊಲೀಸರ ಕಸ್ಟಡಿಗೆ!

ಭೂಗತ ಪಾತಕಿ ರವಿ ಪೂಜಾರಿಯನ್ನು ನಗರದ ನ್ಯಾಯಾಲಯವೊಂದು 10 ದಿನಗಳ ಕಾಲ ಮುಂಬೈ ಪೊಲೀಸರ ಕಸ್ಟಡಿಗೆ ನೀಡಿದೆ
ಭೂಗತ ಪಾತಕಿ ರವಿ ಪೂಜಾರಿ
ಭೂಗತ ಪಾತಕಿ ರವಿ ಪೂಜಾರಿ
Updated on

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ನಗರದ ನ್ಯಾಯಾಲಯವೊಂದು 10 ದಿನಗಳ ಕಾಲ ಮುಂಬೈ ಪೊಲೀಸರ ಕಸ್ಟಡಿಗೆ ನೀಡಿದೆ. 2015ರ ಮಹಾರಾಷ್ಟ್ರ ಸಂಘಟಿತ ಅಪರಾಧ ಕೃತ್ಯ ನಿಯಂತ್ರಣ (ಎಂಸಿಒಸಿಎ) ಪ್ರಕರಣದಲ್ಲಿ ರವಿ ಪೂಜಾರಿಯನ್ನು ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲು ಅಗತ್ಯವಿರುವುದಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ  ಮುಂಬೈ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.  ಇದೇ ಪ್ರಕರಣದಡಿ ಬಿಲ್ಡರ್ ರಾಜು ಪಾಟೀಲ್ ಹತ್ಯೆಗೆ ಸಂಚಿನ ಆರೋಪದ ಮೇರೆಗೆ ರವಿ ಪೂಜಾರಿ ಸಹಚರರನ್ನು ಬಂಧಿಸಲಾಗಿದೆ.

ಆರೋಪಿಯ ಕಸ್ಟಡಿಗೆ ಸಂಬಂಧಿಸಿದಂತೆ ಕಾರಾಗೃಹ ಅಧಿಕಾರಿಗಳಿಗೆ ಎಂಸಿಒಸಿಎ ಪ್ರಕರಣದ ವಿಶೇಷ ನ್ಯಾಯಾಧೀಶರು ಬರೆದಿರುವ ಪತ್ರ ಸೇರಿದಂತೆ ಮತ್ತಿತರ ದಾಖಲೆಗಳನ್ನು ಒದಗಿಸಿ ರವಿ ಪೂಜಾರಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಮುಂಬೈ ಅಪರಾಧ ವಿಭಾಗದ ದರೋಡೆ ನಿಗ್ರಹ ದಳದ ಪೊಲೀಸ್ ಅಧಿಕಾರಿಯೊಬ್ಬರು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡರು.

ಆದರೆ, ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಪೂಜಾರಿ ಪರ ವಕೀಲರು, ಹಸ್ತಾಂತರ ಆದೇಶದಲ್ಲಿ (ಇಒ) ಪ್ರಕರಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲದ ಕಾರಣ ಅರ್ಜಿಯನ್ನು ಮಾನ್ಯ ಮಾಡಬಾರದು, ಕರ್ನಾಟಕ ಹೈಕೋರ್ಟ್ ಮುಂದೆ ರಿಟ್ ಅರ್ಜಿ ಬಾಕಿ ಇದೆ ಮತ್ತು ಕರ್ನಾಟಕದ ಪ್ರಕರಣಗಳನ್ನು ಇತ್ಯರ್ಥಪಡಿಸುವವರೆಗೆ ಆರೋಪಿಯನ್ನು ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಕೋವಿಡ್-19 ಪರಿಸ್ಥಿತಿಯಲ್ಲಿ ಒಂದು ವೇಳೆ ಆರೋಪಿಯನ್ನು ಮುಂಬೈಗೆ ಸ್ಥಳಾಂತರ ಮಾಡಿದರೆ ಸೋಂಕು ತಗುಲುವ ಸಾಧ್ಯತೆಯಿದೆ. ಇಂತಹ ಘಟನೆಯಲ್ಲಿ ಆರೋಪಿಯನ್ನು ಅಲ್ಲಿ ಇಡುವುದು ಸಾಧ್ಯವಿಲ್ಲ, ಮುಂಬೈಯಲ್ಲಿ ಪೂಜಾರಿ ಜೀವಕ್ಕೆ ಅಪಾಯವಿರುವುದಾಗಿ ಹೇಳಿದರು.

ವಾದ ವಿವಾದ ಆಲಿಸಿದ 61ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಧೀಶ ಎಸ್ ಆರ್ ಮಾಣಿಕ್ಯ, ಡಿಸೆಂಬರ್ 12 ರ ಮೊದಲು ಪೂಜರಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಮತ್ತು ಮುಂಬೈಗೆ ಕರೆದೊಯ್ಯುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com