ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧವಾಗುವುದು ಬಹುತೇಕ ಖಚಿತ ಎಂಬ ಬೆಳವಣಿಗೆಗಳು ಕಾಣುತ್ತಿವೆ. ಸದ್ಯತದಲ್ಲೇ ಕಾನೂನುಗಳನ್ನು ಜಾರಿಗೆ ತರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ವಲಯದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ಈ ಬಾರಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗುವ ಸಾಧ್ಯತೆಗಳು ಕಡಿಮೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವಾಣ್ ಅವರು ಒಂದೆಡೆ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೀಘ್ರದಲ್ಲೇ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ. ಮುಂದಿನ ಅಧಿವೇಶನದಲ್ಲಿ ಗೋವುಗಳ ಕಳ್ಳತನ, ಹತ್ಯೆ ನಿಷೇಧ ಕಾಯ್ದೆಗಳು ಜಾರಿಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಪ್ರಭು ಚೌಹಾಣ್ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ಸಿಟಿ ರವಿಯವರು ಹೇಳಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಹಾಗೂ ಕೋರ್ ಕಮಿಟಿ ಸಭೆಯಲ್ಲೂ ಈ ಕುರಿತಾಗಿ ಚರ್ಚೆ ನಡೆಸಲಾಗಿದೆ. ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆಯುವ ನಿಟ್ಟಿನಲ್ಲಿ ಕಾಯ್ದೆಗಳನ್ನು ಜಾರಿಗೊಳಿಸುವ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ. ಡಿಸೆಂಬರ್ 7-15ರವರೆಗೂ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಈ ಬಗ್ಗೆ ಕಾನೂನು ಜಾರಿಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಗೋಹತ್ಯೆ ನಿಷೇಧ ಮಸೂದೆಯನ್ನು ಬಿಜೆಪಿ ಸರ್ಕಾರವು ಹಲವು ವರ್ಷಗಳ ಹಿಂದೆಯೇ ಪರಿಚಯಿಸಿತ್ತು, ಆದರೆ ಅಧ್ಯಕ್ಷರ ಒಪ್ಪಿಗೆ ಪಡೆಯುವಲ್ಲಿ ವಿಫಲವಾಗಿತ್ತು. ಇದೀಗ ಮೊದಲು ಪರಿಚಯಿಸಿದ ಮಸೂದೆಯನ್ನು ಪರಿಶೀಲಿಸುತ್ತೇವೆ ಮತ್ತು ಇದೇ ರೀತಿಯ ಮಸೂದೆಗಳನ್ನು ಇತರ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಕುರಿತಂತೆಯೂ ಅಧ್ಯಯನ ಮಾಡಲಾಗುತ್ತದೆ ಎಂದು ಸಿಟಿ ರವಿಯವರು ತಿಳಿಸಿದ್ದಾರೆ.
ಈಗ, ನಾವು ಗೋಹತ್ಯೆ ತಡೆಗಟ್ಟಲು ಕಠಿಣ ಕ್ರಮಗಳನ್ನು ತರಬೇಕಾಗಿದೆ. ಕೇವಲ 50 ರೂ ಅಥವಾ 100 ರೂ ದಂಡ ವಿಧಿಸಿದರೆ ಸಾಲದು. ಕಠಿಣ ಕಾನೂನಿನಿಂದಲೇ ಇದು ಸಾಧ್ಯೆ ಎಂದಿದ್ದಾರೆ.
Advertisement