
ಬೆಂಗಳೂರು: ಕೋವಿಡ್-19 ನಂತರ ಕೇಂದ್ರ ಸರ್ಕಾರದ ಅನ್ ಲಾಕ್ 5 ಮಾರ್ಗಸೂಚಿ ಹೊರಬಿದ್ದರೂ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಲು ಸದ್ಯಕ್ಕೆ ಮುಂದಾಗುತ್ತಿಲ್ಲ.
ಆದರೆ, ಮಕ್ಕಳಲ್ಲಿ ಕೋವಿಡ್-19 ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಹೇಳಿ ರಾಜ್ಯ ಮಕ್ಕಳ ಹಕ್ಕು ಆಯೋಗ ಶಾಲೆಗಳನ್ನು ಪುನರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿ ಪತ್ರ ಬರೆದಿದೆ. ಈ ನಿಟ್ಟಿನಲ್ಲಿ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಅದು ಸೂಚಿಸಿದೆ. ಈ ಶೈಕ್ಷಣಿಕ ವರ್ಷವನ್ನು ಪರೀಕ್ಷೆರಹಿತ ವರ್ಷವೆಂದು ಘೋಷಿಸಿ ಮಾರ್ಗಸೂಚಿ ರಚಿಸಿ ಸರ್ಕಾರದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಿದೆ.
ಮಕ್ಕಳ ಹಕ್ಕು ಆಯೋಗದ ಶಿಫಾರಸಿನಲ್ಲಿ ಏನಿದೆ?: ಕೋವಿಡ್-19 ಮಧ್ಯೆ ಶಾಲೆಗಳಲ್ಲಿ ಭಯಮುಕ್ತ ವಾತಾವರಣವನ್ನು ರಾಜ್ಯ ಸರ್ಕಾರ ಕಲ್ಪಿಸಿಕೊಡಬೇಕು. ಶಾಲೆಗಳು ಆರಂಭವಾಗದಿದ್ದರೆ ಅನೇಕ ಕಡೆಗಳಲ್ಲಿ ಬಾಲ ಕಾರ್ಮಿಕತೆ, ಮಕ್ಕಳ ಸಾಗಾಟ ಮತ್ತು ಬಾಲ್ಯ ವಿವಾಹದಂತಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ.
ಸಿದ್ದತೆ ಕ್ರಮಗಳು ಹೇಗಿರಬೇಕು: 30ಕ್ಕಿಂತ ಕಡಿಮೆ ಮಕ್ಕಳನ್ನು ಸೇರಿಸಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿ, 15 ದಿನಗಳವರೆಗೆ ಅರ್ಧ ದಿನ ಮಾತ್ರ ಶಾಲೆಗಳು ಇರಲಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿರುವ ತರಗತಿಗಳಲ್ಲಿ ಹಂತ ಹಂತವಾಗಿ ಶಾಲೆಗಳನ್ನು ತೆರೆಯಿರಿ. ಮಕ್ಕಳ ಶುಚಿತ್ವಕ್ಕೆ ಶಾಲೆಗಳಲ್ಲಿ ಮೂಲ ಸೌಕರ್ಯಗಳಿರಬೇಕು. ಕೊರೋನಾ ಸೋಂಕು ಹರಡುವ ಬಗ್ಗೆ ಶಾಲೆಗಳು ಮಕ್ಕಳಿಗೆ ಮತ್ತು ಪೋಷಕರಿಗೆ ಜಾಗೃತಿ ಮೂಡಿಸಬೇಕು.
11 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಶಿಕ್ಷಕರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ಶಾಲೆಗಳಲ್ಲಿ ಕೈ ತೊಳೆಯುತ್ತಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲಾ ಮಕ್ಕಳಿಗೆ ಪ್ರತ್ಯೇಕ ಶಿಷ್ಟಾಚಾರವನ್ನು ಹೊರಡಿಸಬೇಕು.
ಸಂಪುಟದ ತೀರ್ಮಾನ, ಸಚಿವ ಗೋಪಾಲಯ್ಯ: ಶಾಲೆಗಳನ್ನು ಆರಂಭಿಸುವ ಬಗ್ಗೆ ಸಚಿವ ಸಂಪುಟ ನಿರ್ಧಾರ ಕೈಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ.
ಹಾಸನದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳ ಜೊತೆ ಚರ್ಚಿಸಿ ಸರ್ಕಾರ ಒಂದು ನಿರ್ಧಾರಕ್ಕೆ ಬರಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
Advertisement