ಕೊರೋನಾ ವಿರುದ್ಧ ದಿಟ್ಟ ಹೋರಾಟ ನಡೆಸಿ ಮರಣ ಪ್ರಮಾಣ ತಗ್ಗಿಸಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ

ಕೋವಿಡ್ ರೋಗಿಗಳ ಮರಣ ಪ್ರಮಾಣವನ್ನು ಶೇ.1ರೊಳಗೆ ತರಲು ಒಂದು ವಾರದೊಳಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ರೋಗಿಗಳ ಮರಣ ಪ್ರಮಾಣವನ್ನು ಶೇ.1ರೊಳಗೆ ತರಲು ಒಂದು ವಾರದೊಳಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ರಾಜ್ಯದಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಗುರುವಾರ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಯವರು ಸೋಂಕು ಹಬ್ಬುವಿಕೆ ತಡೆಯಲು ಪರಿಣಾಮಕಾರಿ ಕ್ರಮಕೈಗೊಳ್ಳಬೇಕು. ಸೋಂಕಿತರನ್ನು ಶೀಘ್ರ ಪತ್ತೆ ಮಾಡುವ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಲು ಹೆಚ್ಚಿನ ಮುತುವರ್ಜಿವಹಿಸಬೇಕು ಎಂದು ಸೂಚಿಸಿದರು. ಕೋವಿಡ್ ಸಾಂಕ್ರಾಮಿಕತೆಯನ್ನು ತಡೆಯಲು ಅನೇಕ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. 

ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತಗಳಿಗೆ ಯಾವುದೇ ನೆರವು ನೀಡಲು ರಾಜ್ಯ ಸರ್ಕಾರ ಸಿದ್ದವಿದೆ. ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ಸರ್ಕಾರ ಬಂಧವಾಗಿದ್ದು, ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಈಗಾಗಲೇ ತಿಳಿಸಲಾಗಿದೆ, 

ಗ್ರಾಮೀಣ ಪ್ರದೇಶಗಳಿಗೆ ಸೋಂಕು ಹರಡದಂತೆ ಎಚ್ಚರಿಕೆವಹಿಸಬೇಕು. ಕ್ಲಿನಿಕಲ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಆ್ಯಂಟಿಜೆನ್ ಪರೀಕ್ಷೆ ಕಡಿಮೆ ಮಾಡಿ ಆರ್'ಟಿಪಿಸಿಆರ್ ಪರೀಕ್ಷೆಗಳು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು. 

ಇದೇ ವೇಳೆ ದಸರಾ ಆಚರಣೆ ಕುರಿತು ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಮುಂದಿನ ಒಂದು ವಾರದೊಳಗೆ ಈ ಬಗ್ಗೆ ಪ್ರತ್ಯೇಕ ವರದಿಯನ್ನು ನೀಡಬೇಕು. ದಸರಾ ಕಾರ್ಯಕ್ರಮಗಳು ವರ್ಚುಯಲ್ ಆಗಿ ನಡೆಯಲಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಅಲ್ಲಿನ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com