ಕೊರೋನಾ ಲಸಿಕೆ: ಪೂರ್ವಸಿದ್ಧತೆಯಲ್ಲಿ ರಾಜ್ಯ ಸರ್ಕಾರ!

ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ಮಟ್ಟಹಾಕಲು ಇನ್ನೂ ಯಾವುದೇ ಲಸಿಕೆಗಳು ಅಧಿಕೃತವಾಗಿ ಬಾರದೇ ಇದ್ದರೂ, ಲಸಿಕೆ ಬರುವ ವಿಶ್ವಾಸದಲ್ಲಿರುವ ರಾಜ್ಯ ಸರ್ಕಾರ ಇದಕ್ಕಾಗಿ ಪೂರ್ವಸಿದ್ಧತೆಗಳನ್ನು ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ಮಟ್ಟಹಾಕಲು ಇನ್ನೂ ಯಾವುದೇ ಲಸಿಕೆಗಳು ಅಧಿಕೃತವಾಗಿ ಬಾರದೇ ಇದ್ದರೂ, ಲಸಿಕೆ ಬರುವ ವಿಶ್ವಾಸದಲ್ಲಿರುವ ರಾಜ್ಯ ಸರ್ಕಾರ ಇದಕ್ಕಾಗಿ ಪೂರ್ವಸಿದ್ಧತೆಗಳನ್ನು ನಡೆಸುತ್ತಿದೆ. ಲಸಿಕೆ ಅಧಿಕೃತವಾಗಿ ಬಂದ ಕೂಡಲೇ ತಡಮಾಡದೇ ವಿತರಣೆ ಮಾಡುವ ಸಲುವಾಗಿ ಈ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೊರೋನಾ ಲಸಿಕೆ ಕುರಿತು ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ರಾಜ್ಯ ಆರೋಗ್ಯ ಇಲಾಖೆಯು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಾಮೂಹಿಕವಾಗಿ ಲಸಿಕೆ ನೀಡಲು ಸಿದ್ಧತೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ. 

ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಲಸಿಕೆ ನೀಡಲು ಬಳಕೆ ಮಾಡಿಕೊಳ್ಳುವಂತೆ ಹಾಗೂ ಮೊಬೈಲ್ ಯುನಿಟ್ ಗಳನ್ನೂ ಬಳಕೆ ಮಾಡುವಂತೆ ತಿಳಿಸಿದೆ ಎನ್ನಲಾಗುತ್ತಿದೆ. 

ಲಸಿಕೆ ಬಂದ ಸಂದರ್ಭದಲ್ಲಿ ಯಾವುದೇ ರೀತಿಯ ವಿಳಂಬಗಳೂ ಆಗಬಾರದೆಂಬ ಉದ್ದೇಶದಿಂದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಲಸಿಕೆ ಬರುವುದಕ್ಕೂ ಮುನ್ನವೇ ಸಕಲ ಸಿದ್ಥತೆಗಳೂ ಆಗಿರಬೇಕು ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ಕೋವಿಡ್ -19 ಲಸಿಕೆ ಸಿದ್ಧವಾದ ನಂತರ 400-500 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ಸ್ವೀಕರಿಸಲು ಮತ್ತು ಬಳಸುವ ಯೋಜನೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಸಿದ್ಧಪಡಿಸಿದ್ದು, ಜುಲೈ 2021 ರ ವೇಳೆಗೆ ಸುಮಾರು 25 ಕೋಟಿ ಜನರಿಗೆ ಲಸಿಕೆ ತಲುಪಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಕೋವಿಡ್ ಲಸಿಕೆ ಕಂಡು ಹಿಡಿಯುವ, ಕಂಡು ಹಿಡಿದಿರುವ ಲಸಿಕೆಗಳು ಯಾವ ಹಂತ ತಲುಪಿದೆ, ಲಸಿಕೆ ಸಂಗ್ರಹದಿಂದ ಹಿಡಿದು ಶೇಖರಣೆ, ಲಸಿಕೆ ವಿತರಣೆ, ಫಲಾನುಭವಗಳು, ಲಸಿಕೆ ತಲುಪಿಸವವರಿಗೆ ತರಬೇತಿನೀಡುವ ಕುರಿತು ಕೇಂದ್ರ ಸರ್ಕಾರ ಡಿಜಿಟಲ್ ವೇದಿಕೆಯನ್ನು ನಿರ್ಮಿಸುತ್ತಿದೆ. ರಾಜ್ಯದ ಪ್ರತಿಯೊಬ್ಬ ನಾಗರೀಕನಿಗೂ ಶೀಘ್ರಗತಿಯಲ್ಲಿ ಲಸಿಕೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮೊದಲು ಲಸಿಕೆ ನೀಡಬೇಕಿರುವ ಕೊರೋನಾ ವಾರಿಯರ್ಸ್ ಸೇರಿದಂತೆ ಇತರೆ ಗುಂಪುಗಳ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಭಾರತದಲ್ಲಿ ಮೂರು ಲಸಿಕೆಗಳು ಕ್ಲಿನಿಯರ್ ಟ್ರಯಲ್ ಹಂತದಲ್ಲಿದೆ. ಅಸ್ಟ್ರಾಜೆನೆಕಾ ಮತ್ತು ಯೂನಿವರ್ಸಿಟಿ ಆಫ್ ಆಕ್ಸ್‌ಫರ್ಡ್‌ನ ಲಸಿಕೆ ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹಯೋಗದೊಂದಿಗೆ ಮೂರನೇ ಹಂತದ ಪ್ರಯೋಗಗಳಲ್ಲಿದ್ದರೆ, ಝೈಡಸ್ ಕ್ಯಾಡಿಲಾ ಲಸಿಕೆ 2ನೇ ಹಂತದಲ್ಲಿದೆ. ಇವು ಆಗಸ್ಟ್ 6 ರಿಂದ ತಮ್ಮ ಪ್ರಯೋಗಗಳನ್ನು ಆರಂಭಿಸಿದ್ದರು. ಭಾರತ್ ಬಯೋಟೆಕ್ ಸೆಪ್ಟೆಂಬರ್‌ನಿಂದ ತನ್ನ ಪ್ರಯೋಗವನ್ನು ಆರಂಭಿಸಿದ್ದು, ಈ ಲಸಿಕೆ 2ನೇ ಹಂತದಲ್ಲಿದೆ. ಇದಲ್ಲದೆ, ಈಗಾಗಲೇ ಕೇಂದ್ರ ಸರ್ಕಾರ ಲಸಿಕೆ ಕುರಿತಂತೆ ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com