ಜ್ಞಾನಭಾರತಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಕರ್ನಾಟಕ ಹೈಕೋರ್ಟ್ ಒಲವು

ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲು ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಕರ್ನಾಟಕ ಹೈಕೋರ್ಟ್ ಶಿಫಾರಸು ಮಾಡಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲು ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಕರ್ನಾಟಕ ಹೈಕೋರ್ಟ್ ಶಿಫಾರಸು ಮಾಡಿದೆ.

ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ 2012ರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ಆರೋಪಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ. ಆದರೆ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಈ  ಅಪರಾಧದ ಭೀತಿಯನ್ನು ತಡೆಯಲು ಹೈಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಲು ಈ ಸಲಹೆಯನ್ನು ನೀಡಿದೆ. ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 376 ಡಿ ಯ ನಿಬಂಧನೆಗಳಿಗೆ ಹೆಚ್ಚಿನ ತಿದ್ದುಪಡಿ ತರಲು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ನಟರಾಜನ್ ಅವರ ವಿಭಾಗೀಯ ಪೀಠವು  ಶಾಸಕಾಂಗ / ಕೇಂದ್ರ ಸರ್ಕಾರಕ್ಕೆ ಈ ಶಿಫಾರಸು ಮಾಡಿದೆ, ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. 

'ಅತ್ಯಾಚಾರವು ಸಂತ್ರಸ್ತ ಯುವತಿ ವಿರುದ್ಧದ ಅಪರಾಧ ಪ್ರಕರಣ ಮಾತ್ರವಲ್ಲ. ಇಡೀ ಸಮಾಜದ ವಿರುದ್ಧವಾದ ಅಪರಾಧ ಎಂದು ತಿಳಿಸಿದ ವಿಭಾಗೀಯ ಪೀಠ, ಶಿಕ್ಷೆ ರದ್ದುಗೊಳಿಸಲು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ನಮ್ಮ ವಿರುದ್ಧ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದನ್ನು ಪರಿಗಣಿಸಿ  ಮೃದು ಧೋರಣೆ ತೋರಿಸಬೇಕು ಎಂದು ಅಪರಾಧಿಗಳು ಕೋರಿದ್ದರು. ಆಪಾದಿತರು ಕೃತ್ಯ ನಡೆಸಿದ ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕರವಸ್ತ್ರವೇ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಪ್ರಮುಖ ಸಾಕ್ಷ್ಯವಾಗಿದೆ. ಕರವಸ್ತ್ರ ಸಂತ್ರಸ್ತೆಯ ಪಾಲಿಗೆ ಸುದರ್ಶನ ಚಕ್ರ ಆಯಿತು ಎಂದು ಪೀಠ ಅಭಿಪ್ರಾಯಪಟ್ಟಿತು.

‘ಯಾವುದೇ ಮಗಳ ಮೇಲಿನ ದಾಳಿ ನಮ್ಮ ಮೇಲಿನ ದಾಳಿ’
ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ನಟರಾಜನ್ ಅವರ ನ್ಯಾಯಪೀಠವು ನಿರ್ಭಯಾ ಪ್ರಕರಣ ಮತ್ತು ಕಾನೂನು ವಿದ್ಯಾರ್ಥಿಯ ಮೇಲೆ ಸಾಮೂಹಿಕ ಅತ್ಯಾಚಾರದ ನಡುವೆ, ಒಂದೇ ವ್ಯತ್ಯಾಸವೆಂದರೆ, ಹಿಂದಿನದರಲ್ಲಿ, ಆಕೆಯ ಮೇಲೆ ಕ್ರೂರ ಅಪರಾಧ ನಡೆದ ನಂತರ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ, ಆದರೆ ಈ  ಪ್ರಕರಣದಲ್ಲಿ ಸಂತ್ರಸ್ಥೆ ಅತ್ಯಾಚಾರದ ಬಳಿಕ ತನ್ನ ಕಾನೂನು ಕೋರ್ಸ್ ಅನ್ನು ನಿಲ್ಲಿಸಿ ತನ್ನ ತಾಯ್ನಾಡು ನೇಪಾಳಕ್ಕೆ ಮರಳಿದ್ದಾಳೆ. ನಾವು, ನ್ಯಾಯಾಧೀಶರು, ಸಾಮಾಜಿಕ ಪೋಷಕರು. ಹುಡುಗಿಯರ / ಮಹಿಳೆಯರ ಸಮಾಜದ ಬಗೆಗಿನ ನಮ್ಮ ಕಾಳಜಿಯನ್ನು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತಗೊಳಿಸಬಹುದಾದರೆ,  ಯಾರೊಬ್ಬರ ಮಗಳ ಮೇಲಿನ ಆಕ್ರಮಣವು ನಮ್ಮ ಮಗಳ ಮೇಲಿನ ಆಕ್ರಮಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

'ನಾವು ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಭಾರತದ ಕನಸನ್ನು ಸಾಧಿಸಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇಶದ ಸ್ವಾತಂತ್ರ್ಯದ ಏಳು ದಶಕಗಳ ನಂತರವೂ ಭಾರತವು ಮಹಿಳೆಯರ ಸಬಲೀಕರಣವನ್ನು ಸಾಧಿಸಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತಿಲ್ಲ. ಅತ್ಯಾಚಾರವು ಮಹಿಳೆಯರ ಮೇಲಿನ  ಅಪರಾಧ ಮಾತ್ರವಲ್ಲ, ಇಡೀ ನಾಗರಿಕ ಸಮಾಜದ ವಿರುದ್ಧವಾಗಿದೆ. ಭೀಕರ ಘಟನೆಯಿಂದಾಗಿ, ರಾಷ್ಟ್ರದ ಕಾನೂನು ಸುವ್ಯವಸ್ಥೆ, ಅದರಲ್ಲೂ ವಿಶೇಷವಾಗಿ ಕರ್ನಾಟಕವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ದೇಶದ ಖ್ಯಾತಿಯು ಅಪಾಯದಲ್ಲಿರುವುದರಿಂದ, ಆರೋಪಿಗಳಿಗೆ ಯಾವುದೇ ಮೃದುತ್ವವನ್ನು  ತೋರಿಸಲಾಗುವುದಿಲ್ಲ ಪೀಠ ಹೇಳಿತು.

ಮನುಸ್ಮೃತಿ ಉಲ್ಲೇಖ
160 ಪುಟಗಳ ಆದೇಶದಲ್ಲಿ ಹಲವು ಕಡೆ ಮನುಸ್ಮೃತಿ ಮತ್ತು ವೇದದಲ್ಲಿನ ಶ್ಲೋಕಗಳನ್ನು ಪೀಠ ದಾಖಲಿಸಿದೆ. ‘ಮಹಿಳೆಯರನ್ನು ಗೌರವಿಸದಿದ್ದಲ್ಲಿ ಎಲ್ಲಾ ಆಚರಣೆಗಳೂ ವ್ಯರ್ಥವಾಗುತ್ತವೆ. ಮಹಿಳೆ ಸಂತಸದಿಂದ ಇರದ ಕುಟುಂಬ ಬಹುಬೇಗ ನಾಶವಾಗುತ್ತದೆ. ಮಹಿಳೆ ಸಂತಸದಿಂದ ಇರುವ ಕುಟುಂಬ ಸದಾ ಏಳಿಗೆ  ಕಾಣುತ್ತದೆ’ ಎಂಬ ಮನುಸ್ಮೃತಿಯ ಸಾಲುಗಳನ್ನು ಪೀಠ ಉಲ್ಲೇಖಿಸಿದೆ.

2012ರ ಅ.13ರಂದು ರಾತ್ರಿ 9.30ರ ಸುಮಾರಿನಲ್ಲಿ ಗೆಳೆಯನೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಸುತ್ತುವರಿದ 7 ಮಂದಿ ಮಾರಕಾಸ್ತ್ರಗಳನ್ನು ತೋರಿಸಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಪರಾಧಿಗಳಾದ ರಾಮು, ಶಿವಣ್ಣ, ಮದ್ದೂರ, ಎಲೆಯಯ್ಯ, ಈರಯ್ಯ, ರಾಜ  ಮತ್ತು ದೊಡ್ಡ ಈರಯ್ಯ ಏಳು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com