ಕೊರೋನಾ ವೈರಸ್ ಲಾಕ್ ಡೌನ್: 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ನೀಡಲು ರಾಜ್ಯ ಸರ್ಕಾರ ನಿರ್ಧಾರ 

ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಘೋಷಣೆ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ರಾಜ್ಯದ ಬಡ ಜನತೆ ಬವಣೆ ಪಡಬಾರದು ಎಂಬ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ 3 ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕುರಿತು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಘೋಷಣೆ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ರಾಜ್ಯದ ಬಡ ಜನತೆ ಬವಣೆ ಪಡಬಾರದು ಎಂಬ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ 3 ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕುರಿತು ನಿರ್ಧರಿಸಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸಂಪುಟ ಸಭೆ ಬಳಿಕ ಮಾದ್ಯಮಗಳಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು. 'ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ  ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಉಚಿತ ವಿತರಣೆಗೆ ಕ್ರಮ ತೆಗೆದುಕೊಂಡಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲ ಸಿಲಿಂಡರ್‌ ಉಚಿತವಾಗಿ  ವಿತರಿಸಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ರೂ 27.52 ಕೋಟಿ ಭರಿಸಲಿದ್ದು, ಸುಮಾರು 1 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಹೇಳಿದರು.

ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ
ಇದೇ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಬೊಕ್ಕಸಕ್ಕೆ ರೂ 137 ಕೋಟಿ ಹೊರೆಯಾಗಲಿದೆ. ಸುಮಾರು 2,800  ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಅವರು ಹೇಳಿದರು.

ಮೈಸೂರು ಮಿನರಲ್ಸ್‌ ಲಿಮಿಟೆಡ್‌ಗೆ ಸೇರಿದ್ದ ಜಾಗ ಕಂದಾಯ ಇಲಾಖೆಯದ್ದು
ಇನ್ನು ಮೈಸೂರು ಮಿನರಲ್ಸ್‌ ಲಿಮಿಟೆಡ್‌ಗೆ ಸೇರಿದ ಜಾಗವು ಕಂದಾಯ ಇಲಾಖೆಗೆ ಸೇರಿದ್ದೇ..? ಅಥವಾ ಅರಣ್ಯ ಇಲಾಖೆಗೆ ಸೇರಿದ್ದೇ? ಎಂಬ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿತ್ತು. ಅದು ಇದೀಗ ಇತ್ಯರ್ಥವಾಗಿದ್ದು, ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎಂಬ ತೀರ್ಪನ್ನು ಸಂಪುಟ ಸಭೆ  ಅಂಗೀಕರಿಸಿದೆ. 

ಅಷ್ಟು ಮಾತ್ರವಲ್ಲದೆ ಸಂಪುಟಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಪ್ರಸ್ತುತ ಜೀವಾವಧಿ ಶಿಕ್ಷೆಗೊಳಗಾಗಿ 14 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಅಥವಾ 10 ವರ್ಷ ಶಿಕ್ಷೆ ಅನುಭವಿಸಿದ ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು  ಸಚಿವ ಸಂಪುಟ ಅನುಮೋದಿಸಿದೆ. ಅಂತೆಯೇ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ದರೋಜಿ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರೂ 23.40 ಕೋಟಿ ಮಂಜೂರು ಮಾಡಲು ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ಮೂರನೇ ಹಂತದಲ್ಲಿ ಕೇರಳ–  ಕರ್ನಾಟಕ ಗಡಿ ರಸ್ತೆ ಅಭಿವೃದ್ಧಿ. ಇದಕ್ಕಾಗಿ ಕೇಂದ್ರದ ಪಾಲು ರೂ 1,274 ಕೋಟಿ ಒಳಗೊಂಡಂತೆ ರೂ 2,729.66 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ.

ಇದಲ್ಲದೆ ಕರ್ನಾಟಕ ರೈತ ಸುರಕ್ಷಾ ಫಸಲ್‌ ಭೀಮಾ ಯೋಜನೆಯಡಿ ಬ್ಯಾಂಕುಗಳಲ್ಲಿ ರೈತರ ಫಸಲುಗಳಿಗೆ ಮಾಡಿದ ವಿಮೆಗೆ ರಾಜ್ಯ ಸರ್ಕಾರದ ಪಾಲಿನ 2016 ರ ಸಾಲಿನ ವಿಮಾ ಮೊತ್ತ ರೂ 18.59 ಕೋಟಿ ಭರಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com