ವಿಧಾನ ಸಭೆಯಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರ: ಕಾನೂನು ಏನು ಹೇಳುತ್ತದೆ, ಶಿಕ್ಷೆ ಏನು?

ಕಾಂಗ್ರೆಸ್ ಮತ್ತು ಜೆಡಿಎಸ್ ನ ತೀವ್ರ ವಿರೋಧದ ಮಧ್ಯೆ ಕರ್ನಾಟಕ ವಿಧಾನಸಭೆಯಲ್ಲಿ ನಿನ್ನೆ ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಪಶುಗಳ ಸಂರಕ್ಷಣೆ ಮಸೂದೆ 2020 ಅನುಮೋದನೆಗೊಂಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನ ತೀವ್ರ ವಿರೋಧದ ಮಧ್ಯೆ ಕರ್ನಾಟಕ ವಿಧಾನಸಭೆಯಲ್ಲಿ ನಿನ್ನೆ ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಪಶುಗಳ ಸಂರಕ್ಷಣೆ ಮಸೂದೆ 2020 ಅನುಮೋದನೆಗೊಂಡಿದೆ. 

ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಸಂಪೂರ್ಣವಾಗಿ ಜಾರಿ ತರುವುದು ಈ ಮಸೂದೆಯ ಉದ್ದೇಶವಾಗಿದೆ. ಗೋವುಗಳ ಕಳ್ಳಸಾಗಣೆ, ಮಾರಾಟ, ಪಶುಗಳ ಮೇಲೆ ಹಿಂಸೆ ಮಾಡುವವರನ್ನು ಸಹ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಈ ಮಸೂದೆಯನ್ನು ನಿನ್ನೆ ವಿಧಾನಸಭೆಯಲ್ಲಿ ಮಂಡಿಸುವ ಮೊದಲು ಬಿಜೆಪಿ ಸದಸ್ಯರು ಕೇಸರಿ ಶಾಲುಗಳನ್ನು ತೊಟ್ಟು ವಿಧಾನ ಸೌಧದ ಒಳಗೆ ಗೋ ಪೂಜೆ ನೆರವೇರಿಸಿದ್ದು ಕಂಡುಬಂತು.

ಪಶು ಸಂಗೋಪನಾ ಸಚಿವ ಪ್ರಭು ಚವಾನ್, ನಿನ್ನೆ ಅಪರಾಹ್ನ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದರು. ನಿನ್ನೆಯ ಕಲಾಪದಲ್ಲಿ ತರಾತುರಿಯಾಗಿ ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ವಿಧೇಯಕವನ್ನು ಮಾತ್ರ ಇಂದಿನ ಕಲಾಪದಲ್ಲಿ ಮಂಡಿಸುವುದು ಎಂದು ವ್ಯವಹಾರಗಳ ಸಲಹಾ ಸಮಿತಿಯಲ್ಲಿ ನಿರ್ಧಾರವಾಗಿರುವಾಗ ನೀವು ಹೊಸ ಮಸೂದೆಯನ್ನು ಹೇಗೆ ಮಂಡಿಸುತ್ತೀರಿ. ಅಚ್ಚರಿಯ ರೀತಿಯಲ್ಲಿ ತರಾತುರಿಯಲ್ಲಿ ಏಕೆ ತರುತ್ತಿದ್ದೀರಿ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಉಳಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಕಲಾಪ ಮುಂದೂಡುವಂತೆ ಒತ್ತಾಯಿಸಿದರು.

ಅದಕ್ಕೆ ಬಿಜೆಪಿ ಸದಸ್ಯರು ಪ್ರತಿ ವಾಗ್ದಾಳಿ ನಡೆಸಿ, 2010ರಲ್ಲಿ ಬಿಜೆಪಿ ಅನುಮೋದನೆ ಮಾಡಿದ್ದ ಮಸೂದೆಯನ್ನು ಕಾಂಗ್ರೆಸ್ 2013ರಲ್ಲಿ ಹಿಂತೆಗೆದುಕೊಂಡಾಗಲೂ ಇದೇ ರೀತಿ ಮಾಡಿದ್ದಿರಿ. ಮಸೂದೆಯ ಪ್ರಕಾರ, ಜಾನುವಾರು ಎಂದರೆ ಹಸು, ಹಸುವಿನ ಕರು, ಎತ್ತು, ಎಮ್ಮೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಜಾನುವಾರುಗಳನ್ನು ಹತ್ಯೆ ಮಾಡಿದರೆ ಮೂರರಿಂದ ಏಳು ವರ್ಷದವರೆಗೆ ಕಠಿಣ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ದಂಡವಾಗಿ ಮೊದಲ ಸಲ 50 ಸಾವಿರ ರೂಪಾಯಿಗಳಿಂದ 5 ಲಕ್ಷದವರೆಗೆ ಇರುತ್ತದೆ. ಎರಡನೇ ಸಲ 1 ಲಕ್ಷದಿಂದ 10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.

ಗೋ ಹತ್ಯೆ ನಿಷೇಧ ಮಸೂದೆ ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿದೆ. ಅದಕ್ಕೆ ಕೆಲವು ತಿದ್ದುಪಡಿಗಳನ್ನು ನಾವು ತರುತ್ತಿದ್ದು, ದಂಡದ ಮೊತ್ತ ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದ್ದೇವೆ ಎಂದರು. ಅನಾರೋಗ್ಯ ಮತ್ತು ಇತರ ಗಂಭೀರ ಕಾರಣಗಳಿಗಾಗಿ ಗೋವನ್ನು ಹತ್ಯೆ ಮಾಡಬೇಕೆಂದರೆ ಇನ್ನು ಮುಂದೆ ಪಶು ಸಂಗೋಪನಾ ಇಲಾಖೆಯಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ. 13 ವರ್ಷಕ್ಕಿಂತ ಮೇಲಿನ ಎಮ್ಮೆಗಳನ್ನು ಕೊಲ್ಲಲು ಮಸೂದೆಯಲ್ಲಿ ಅನುಮತಿಯಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ ಮಾಧುಸ್ವಾಮಿ ತಿಳಿಸಿದರು.

ಮಸೂದೆ, ಸಬ್ ಇನ್ಸ್‌ಪೆಕ್ಟರ್ ಅಥವಾ ಉನ್ನತ ಹುದ್ದೆಯ ಪೊಲೀಸ್ ಅಧಿಕಾರಿಗೆ ಕಳ್ಳಸಾಗಣೆ ಮಾಡಲು ಅಥವಾ ಕೊಲ್ಲಲು ಹೊರಟಿರುವ ಹಸುಗಳನ್ನು ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಅಧಿಕಾರ ನೀಡುತ್ತದೆ. ವಶಪಡಿಸಿಕೊಂಡ ನಂತರ, ಅಧಿಕಾರಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ವರದಿ ಮಾಡಬೇಕು. ಹಣಕಾಸಿನ ಪರಿಣಾಮಗಳಿಗೆ ಸಂಬಂಧಿಸಿದಂತೆ, ಮಸೂದೆಯು ಈ ಹಂತದಲ್ಲಿ ಅದನ್ನು ಪ್ರಮಾಣೀಕರಿಸಲಾಗುವುದಿಲ್ಲ ಎಂದು ಹೇಳುತ್ತದೆ. ಆದಾಗ್ಯೂ, ಅಗತ್ಯವಿದ್ದಾಗ ಮತ್ತು ಹಣವನ್ನು ಒದಗಿಸಲಾಗುತ್ತದೆ.

ಗೋ ಹತ್ಯೆ ನಿಷೇಧ ಮಸೂದೆ ಏನು ಹೇಳುತ್ತದೆ: 

  • ಗೋ ಹತ್ಯೆ ಅರಿವಿನ ಅಪರಾಧ
  • ಪ್ರಕರಣಗಳನ್ನು ವಿಲೇವಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ರಚಿಸುವಂತೆ ಮಸೂದೆ ಶಿಫಾರಸು ಮಾಡಿದೆ
  • ಇತರ ರಾಜ್ಯಗಳಿಗೆ ಗೋವುಗಳನ್ನು ಸಾಗಣೆ ಮಾಡುವಂತಿಲ್ಲ.
  • ಮೊದಲ ಬಾರಿಗೆ ಮಾಡಿದ ಅಪರಾಧಕ್ಕೆ ದಂಡ, 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ದಂಡ, ಎರಡನೆಯ ಮತ್ತು ನಂತರದ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ದಂಡದ ಮೊತ್ತವಿರುತ್ತದೆ.
  • ವಶಪಡಿಸಿಕೊಂಡ ಗೋಮಾಂಸವನ್ನು ಎಸೆಯಬೇಕೆ ಹೊರತು ಬಳಸಬಾರದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com