ಹಿಂಸಾಚಾರಕ್ಕೆ ತಿರುಗಿದ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಮುಷ್ಕರ; ವಾಹನಗಳಿಗೆ ಬೆಂಕಿ, ಲಾಠಿಪ್ರಹಾರ

ಇತ್ತೀಚೆಗೆ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಾಗಿದ್ದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ಮುಷ್ಕರ ಹಿಂಸಾಚಾರಕ್ಕೆ ತಿರುಗಿದ್ದು, ಕಂಪನಿಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

Published: 12th December 2020 12:02 PM  |   Last Updated: 12th December 2020 01:37 PM   |  A+A-


One of the rooms was also set on fire besides reportedly damaging the vehicles that belonged to Wistron Company.

ಹಿಂಸಾಚಾರಕ್ಕೆ ತಿರುಗಿರುವ ಕಾರ್ಮಿಕರ ಮುಷ್ಕರ

Posted By : Manjula VN
Source : UNI

ಕೋಲಾರ: ಇತ್ತೀಚೆಗೆ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಾಗಿದ್ದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ಮುಷ್ಕರ ಹಿಂಸಾಚಾರಕ್ಕೆ ತಿರುಗಿದ್ದು, ಕಂಪನಿಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಕಳೆದ ಎರಡು ಮೂರು ತಿಂಗಳಿಂದ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದ ಕಾರಣ ಬೆಳ್ಳಂಬೆಳಗ್ಗೆ ಸಾವಿರಾರು ಕಾರ್ಮಿಕರು ಕಂಪನಿ ಮುಂದೆ ಜಮಾಯಿಸಿ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಆಕ್ರೋಶಿತ ಪ್ರತಿಭಟನಕಾರರು ಕಂಪನಿಯ ಕಿಟಕಿ ಗಾಜುಗಳನ್ನು ನುಚ್ಚು ನೂರು ಮಾಡಿ, ಅಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಿಗೆ ಗುತ್ತಿಗೆ ಆಧಾರದ ನಾಲ್ಕನೆಯ ದರ್ಜೆಯ ಕೆಲಸಗಳನ್ನು ನೀಡಿ ಹೊರ ರಾಜ್ಯದ ಅಭ್ಯರ್ಥಿಗಳನ್ನು ಖಾಯಂ ಉದ್ಯೋಗ ಅವಕಾಶಗಳನ್ನು ನೀಡುತ್ತಿರುವ ಬಗ್ಗೆ ಕಾರ್ಮಿಕರಲ್ಲಿ ಆರಂಭದಿಂದಲೂ ಅಸಮಾಧಾನವಿತ್ತು. ಇದೀಗ ಸಂಬಳ ಕೂಡ ಸರಿಯಾಗಿ ನೀಡುತ್ತಿರಲ್ಲ ಎಂದು ಕಾರ್ಮಿಕರು ಬೀದಿಗೆ ಇಳಿದಿದ್ದಾರೆ.

ಸುಮಾರು ಹದಿನೈದು ಸಾವಿರ ಉದ್ಯೋಗ ಸೃಷ್ಟಿಯ ಬೃಹತ್ ಕಂಪನಿ ಇದಾಗಿದ್ದು, ಇನ್ನೂ ಅರ್ಧದಷ್ಟು ನೇಮಕಾತಿಯೂ ಮುಗಿದಿರಲಿಲ್ಲ. ಐಫೋನ್ ತಯಾರಿಸುವ ದೇಶದ ಏಕೈಕ ಕಂಪನಿ ವಿಸ್ಟ್ರಾನ್, ಆರಂಭದಲ್ಲೇ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿದೆ. 

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಕೆಲವು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈಗ ಕಂಪನಿಯ ಬಳಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಆಗಿದೆ. ವೇಮಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲಾರದ ಉಪ ಆಯುಕ್ತೆ ಸತ್ಯಭಾಮಾ ಅವರು, ಘಟನೆ ನಿಜಕ್ಕೂ ದುರಾದೃಷ್ಟಕರ ಸಂಗತಿ. ನೌಕರರಿಗೆ ವೇತನ ಬರುತ್ತಿಲ್ಲ ಎಂದಾದರೆ, ಅವರು ಕಾರ್ಮಿಕ ಇಲಾಖೆಗೆ ಅಥವಾ ಜಿಲ್ಲಾ ಆಡಳಿತ ಮಂಡಳಿಗೆ ನೇರವಾಗಿ ದೂರು ನೀಡಬಹುದಿತ್ತು. ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದರೆ, ಅದರು ಸರಿಯಲ್ಲ. ಘಟನೆಯಲ್ಲಿ ಭಾಗಿಯಾಗಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

ಪ್ರಕರಣ ಸಂಬಂಧ ಸಂಸ್ಥೆಗೂ ನೋಟಿಸ್ ಜಾರಿಗೊಳಿಸಿ, ಸ್ಪಷ್ಟನೆ ನೀಡುವಂತೆ ಕೇಳಲಾಗುತ್ತದೆ ಎಂದಿದ್ದಾರೆ. 

ಘಟನೆ ಕುರಿತು ಸುದ್ದಿ ತಿಳಿಯುತ್ತಿದ್ದಂತೆಯೇ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. 

ಘಟನೆ ನಡೆಯುತ್ತಿದ್ದಂತೆಯೇ ಕೋಲಾರ ಎಸ್'ಪಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪ್ರಾಥಮಿಕ ತನಿಖೆಯಲ್ಲಿ ದೊಡ್ಡ ಮಟ್ಟದಲ್ಲೇ ಹಾನಿಯಾಗಿರುವುದು ಕಂಡು ಬಂದಿದೆ. ಘಟನೆ ಬಗ್ಗೆ ಸಿಸಿಟಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. 


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp