ವಿಸ್ಟ್ರಾನ್ ಐಫೋನ್ ತಯಾರಿಕಾ ಘಟಕದ ಮೇಲೆ ದಾಳಿ ಪ್ರಕರಣ: 128 ಮಂದಿ ಬಂಧನ

ಕೋಲಾರದ ಐಫೋನ್ ತಯಾರಿಕಾ ಘಟಕದ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 128 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ,
ಐಫೋನ್ ತಯಾರಿಕಾ ಘಟಕ
ಐಫೋನ್ ತಯಾರಿಕಾ ಘಟಕ

ಕೋಲಾರ: ಕೋಲಾರದ ಐಫೋನ್ ತಯಾರಿಕಾ ಘಟಕದ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 128 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ,

ಕೋಲಾರದ ನರಸಪುರದಲ್ಲಿ ಶನಿವಾರ ವಿಸ್ಟ್ರಾನ್ ಕಾರ್ಪೊರೇಶನ್ ಎಂಬ ಐಪೋನ್ ತಯಾರಿಕಾ ಸಂಸ್ಥೆಯ ಮೇಲೆ ಪ್ರತಿಭಟನಾ ನಿರತರು ದಾಳಿ ನಡೆಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 128 ಮಂದಿ  ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 4 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂರು ಪ್ರಕರಣಗಳನ್ನು ವಿಸ್ಟ್ರಾನ್ ಕಾರ್ಪೊರೇಶನ್ ಸಂಸ್ಥೆ ದಾಖಲಿಸಿದ್ದು, ಒಂದು ಪ್ರಕರಣವನ್ನು ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರಿಂದ ದಾಖಲಿಸಿದ್ದಾರೆ. ದಾಳಿ ಸಂಬಂಧದ ವಿಡಿಯೋಗಳನ್ನು ಆಧರಿಸಿ  ಈ ಬಂಧನ ಪ್ರಕ್ರಿಯೆ ನಡೆಸಲಾಗಿದೆ. ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೇ ವಿಡಿಯೋಗಳನ್ನು ಆಧರಿಸಿ ನಾವು ಕಾರ್ಯಾಚರಣೆ ನಡೆಸಿದ್ದೆವು ಎಂದು ಎಸ್ ಪಿ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 300ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ 128 ಕಾರ್ಮಿಕರನ್ನು ಭಾನುವಾರ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಪರೆನ್ಸ್‌ ಮೂಲಕ ಹಾಜರು ಪಡಿಸಲಾಯಿತು. ಕೋಲಾರದ ಎಸ್ಪಿ ಕಚೇರಿ  ಹಿಂಭಾಗದ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಯಿತು. 5 ಖಾಸಗಿ ಬಸ್‌ಗಳಲ್ಲಿ 128ಕ್ಕೂ ಹೆಚ್ಚು ಆರೋಪಿಗಳನ್ನು ಕೆಜಿಎಫ್‌, ಚಿಂತಾಮಣಿ ಮತ್ತು ಚಿತ್ರದುರ್ಗ ಜೈಲಿಗೆ ಸಾಗಿಸಲಾಯಿತು.

ಇನ್ನು ದಾಳಿ ನಡೆದ ವಿಸ್ಟ್ರಾನ್ ಕಾರ್ಪೊರೇಶನ್ ಸಂಸ್ಥೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಕಾನೂನು ಮತ್ತು ಸುವ್ಯವಸ್ಥೆ) ಪ್ರತಾಪ್ ರೆಡ್ಡಿ ಮತ್ತು ಕೇಂದ್ರೀಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸೆಮಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. 

ಸಂಸ್ಥೆಯ ಸಿಬ್ಬಂದಿಗಳ ವಿಚಾರಣೆ
ಇನ್ನು ಉತ್ಪಾದನಾ ಘಟಕದ ಬಳಿ ಎರಡು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡಗಳು, ಕೆಎಸ್‌ಆರ್‌ಪಿ ತಂಡ ಮತ್ತು ಸಿವಿಲ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ದಾಳಿಯ ಹಿಂದೆ ಯಾವುದೇ ಸಂಸ್ಥೆ ಇದೆಯೇ ಎಂದು ಪರಿಶೀಲಿಸಲು ಪೊಲೀಸ್ ತಂಡಗಳು ಕಂಪನಿಯ  ಪ್ರತಿನಿಧಿಗಳು ಮತ್ತು ನೌಕರರನ್ನು ವಿಚಾರಣೆ ನಡೆಸುತ್ತಿದೆ ಎಂದು ಸೇಮಂತ್ ಕುಮಾರ್ ಸಿಂಗ್ ಹೇಳಿದರು. ಅಂತೆಯೇ ದಾಳಿಯಿಂದಾಗಿ ಸಂಸ್ಥೆ ಹಾನಿಗೀಡಾಗಿದ್ದು, ದುರಸ್ತಿ ಕಾರ್ಯ ನಡೆಸಿದ ಬಳಿಕ ಒಂದು ವಾರದಲ್ಲಿ ಕಂಪನಿಯು ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com