ಶೀಘ್ರವೇ ತೊಗರಿ ಖರೀದಿ ಕೇಂದ್ರ ತೆರೆಯಿರಿ: ಸರ್ಕಾರಕ್ಕೆ ಅಜಯ್ ಸಿಂಗ್ ಆಗ್ರಹ

ಅಳಿದುಳಿದ ತೊಗರಿ ಬೆಳೆಯಿಂದ ಮಾತ್ರ ರೈತರು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಿದೆ. ಆದ್ದರಿಂದ ಪ್ರತಿ ಕ್ವಿಂಟಾಲ್‌ಗೆ 1500 ರು. ಪ್ರೋತ್ಸಾಹಧನ ನಿಗದಿ ಮಾಡಬೇಕು. ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅಜಯ್ ಸಿಂಗ್ ಒತ್ತಾಯಿಸಿದರು
ಡಾ.ಅಜಯ್ ಸಿಂಗ್
ಡಾ.ಅಜಯ್ ಸಿಂಗ್

ಕಲಬುರಗಿ: ರಾಜ್ಯ ಸರ್ಕಾರ ಶೀಘ್ರವೇ ತೊಗರಿ ಬೇಳೆ ಖರೀದಿ ಕೇಂದ್ರ ಸ್ಥಾಪಿಸಬೇಕು ಜೊತೆಗೆ ಕ್ವಿಂಟಾಲ್ ತೊಗರಿಗೆ ಕೇಂದ್ರದ ಬೆಂಬಲ ಬೆಲೆ 6 ಸಾ.ರೂ ಸೇರಿದಂತೆ ರಾಜ್ಯ ಸರ್ಕಾರ ತನ್ನ ಪಾಲಿನ 1,500 ರೂ. ಪ್ರೋತ್ಸಾಹ ಧನ ಸೇರಿಸಿ 7,500 ರೂ. ಬೆಲೆ ನಿಗದಿಪಡಿಸಿ ಖರೀದಿಗೆ ಮುಂದಾಗಬೇಕು ಎಂದು ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸಕ್ತ ಹಂಗಾಮಿನಲ್ಲಿ ಮಳೆಯಿಂದಾಗಿ ಅತಿವೃಷ್ಟಿ ಸಂಭವಿಸಿದೆ. ಅಳಿದುಳಿದ ತೊಗರಿ ಬೆಳೆಯಿಂದ ಮಾತ್ರ ರೈತರು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಿದೆ. ಆದ್ದರಿಂದ ಪ್ರತಿ ಕ್ವಿಂಟಾಲ್‌ಗೆ 1500 ರು. ಪ್ರೋತ್ಸಾಹಧನ ನಿಗದಿ ಮಾಡಬೇಕು. ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅಜಯ್ ಸಿಂಗ್ ಒತ್ತಾಯಿಸಿದರು.

ತೊಗರಿ ರೈತರಿಗೆ ಪ್ರೋತ್ಸಾಹ ಧನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಲೇ ತನ್ನ ನಿಲುವು ಬಹಿರಂಗಪಡಿಸಲಿ. ರೈತರ ಪರ ಎಂದು ಹೇಳಿಕೊಳ್ಳುವ ಸಿಎಂ ಯಡಿಯೂರಪ್ಪನವರು ಎಂಎಸ್‍ಪಿ, ಪ್ರೋತ್ಸಾಹಕರ ಬೆಲೆ ಸೇರಿದಂತೆ ಕ್ವಿಂಟಾಲ್‍ಗೆ 7, 500 ರು ನಿಗದಿಪಡಿಸಿ ರೈತರಿಂದ ತೊಗರಿ ಖರೀದಿಗೆ ಮುಂದಾಗಲಿ ಎಂದು ಆಗ್ರಹಿಸಿದರು.

ಈ ವಿಚಾರದಲ್ಲಿ ಸರ್ಕಾರ ವಿನಾಕಾರಣ ವಿಳಂಬ ಮಾಡುವುದು ಸರಿಯಲ್ಲ. ಸಂಕಷ್ಟದಿಂದ ಮೊದಲೇ ರೈತರು ಕಣ್ಣೀರು ಹಾಕುತ್ತಿರುವಾಗ ಸರಕಾರ ತೊಗರಿ ಖರೀದಿಗೆ ಕ್ರಿಯಾ ಯೋಜನೆ ರೂಪಿಸಿ ಅಗತ್ಯ ಒಪ್ಪಿಗೆ, ಪರವಾನಿಗೆ ಎಲ್ಲವನ್ನು ಪಡೆದುಕೊಂಡು ಬೇಗ ತೊಗರಿ ಕಣಜದ ರೈತರ ಸಹಾಯಕ್ಕೆ ಧಾವಿಸಬೇಕು, ಇಲ್ಲದಿದ್ದರೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com