ಮೈಸೂರು: ಧೂಮಪಾನಕ್ಕೆ ಆಕ್ಷೇಪ, ಹುಡುಗನ ಕೈ ಮುರಿದ ಪುಂಡರು

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ 15 ವರ್ಷದ ಹುಡುಗನ ಮುಖದ ಮೇಲೆ ಅಪರಿಚಿತ ದುಷ್ಕರ್ಮಿಗಳು ಸಿಗರೇಟ್ ಹೊಗೆಬಿಟ್ಟು, ಹಿಗ್ಗಾಮುಗ್ಗಾ ಥಳಿಸಿ ಆತನ ಕೈ ಮುರಿದಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ಹುಡುಗ
ಹಲ್ಲೆಗೊಳಗಾದ ಹುಡುಗ

ಮೈಸೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ 15 ವರ್ಷದ ಹುಡುಗನ ಮುಖದ ಮೇಲೆ ಅಪರಿಚಿತ ದುಷ್ಕರ್ಮಿಗಳು ಸಿಗರೇಟ್ ಹೊಗೆಬಿಟ್ಟು, ಹಿಗ್ಗಾಮುಗ್ಗಾ ಥಳಿಸಿ ಆತನ ಕೈ ಮುರಿದಿರುವ ಘಟನೆ ನಡೆದಿದೆ.

15 ವರ್ಷದ ವಿಕಾಸ್ ( ಹೆಸರು ಬದಲಾಯಿಸಲಾಗಿದೆ) ಹಲ್ಲೆಗೊಳಗಾದ ಹುಡುಗ. ಫೆಬ್ರವರಿ 26 ರಂದು ನಡೆಯಲಿರುವ 10ನೇ ತರಗತಿ ಸಿಬಿಎಸ್ ಇ ಪರೀಕ್ಷೆಗಾಗಿ ತಯಾರಾಗುತ್ತಿದ್ದ ಈ ಹುಡುಗನ ಕೈ ಮುರಿಯುವಂತೆ ಹಲ್ಲೆ ಮಾಡಲಾಗಿದೆ.ತೀವ್ರ ಗಾಯಗಳಿಂದಾಗಿ ಕುವೆಂಪುನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.

ಮನೆಯಲ್ಲಿಯೇ ಕುಳಿತು ಪರೀಕ್ಷೆಗೆ ತಯಾರಾಗುತ್ತಿದ್ದ ವಿಕಾಸ್ ಬುಧವಾರ ಸಂಜೆ ಕೆಎಚ್ ಬಿ ಕಾಲೋನಿಯ ಸೆಂಟ್ ಜಾನ್ ಶಾಲೆಯಲ್ಲಿ ಸ್ಯಾಕ್ಸ್ ತರಲು ಬಂದಿದ್ದಾನೆ. ಮನೆಗೆ ಮರಳುವಾಗ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದ ಕೆಲ ಯುವಕರು ಆತನ ಮುಖದ ಮೇಲೆ ಹೊಗೆ ಬಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಅಪರಿಚಿತ ದುಷ್ಕರ್ಮಿಗಳು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ಮುಖದ ಮೇಲೆ ಹೊಗೆ ಬಿಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ಕೈಗಳನ್ನು ಮುರಿಯಲಾಗಿದೆ. ಪರೀಕ್ಷೆ ಬರೆಯಬೇಕಿತ್ತು. ಆದರೆ, ಇದೀಗ ಕೈ ಮುರಿದು ಆಸ್ಪತ್ರೆಯಲ್ಲಿ ದಾಖಲಾಗುವಂತಾಗಿದೆ. ವಿಕಾಸ್ ಉತ್ತಮ ಬಾಸ್ಕೆಟ್ ಬಾಲ್ ಕ್ರೀಡಾಪಟು ಆಗಿದ್ದ, ಈಗ ಆತನ ಸ್ಥಿತಿ ನೋಡಲು ಆಗುತ್ತಿಲ್ಲ. ಹಲ್ಲೆಕೋರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಕಾಸ್ ತಂದೆ ಶಿವಮೂರ್ತಿ ಒತ್ತಾಯಿಸಿದ್ದಾರೆ. 

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಐಪಿಸಿ ಸೆಕ್ಷನ್ 326, 504, 34 ಮತ್ತು 75ರ ಪ್ರಕಾರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com